ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಅಬ್ಬರ ಮಿತಿಮೀರುತ್ತಿದ್ದು, ಎರಡು ಕಾಡುಕೋಣಗಳ ನಡುವಿನ ಭೀಕರ ಕಾಳಗವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಎರಡು ಬಲಿಷ್ಠ ಕಾಟಿಗಳ ನಡುವೆ ನಡೆದ ಸಂಘರ್ಷದಲ್ಲಿ, ಒಂದು ಕಾಡುಕೋಣ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಕಾಟಿಯು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತಜ್ಞ ವೈದ್ಯರ ಮೂಲಕ ತುರ್ತು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರಾದರೂ, ತೀವ್ರವಾಗಿ ನರಳುತ್ತಿದ್ದ ಕಾಡುಕೋಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೇವಲ ಮೂರು ದಿನಗಳ ಹಿಂದಷ್ಟೇ ಕಾಡುಕೋಣದ ದಾಳಿಗೆ ಸಿಲುಕಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಸಿರಾಗಿರುವಾಗಲೇ ಈ ಅನಾಹುತ ಸಂಭವಿಸಿದೆ. ನಿರಂತರವಾಗಿ ನಡೆಯುತ್ತಿರುವ ಕಾಟಿಗಳ ಹಾವಳಿಯಿಂದ ರೈತರು ಮತ್ತು ತೋಟದ ಮಾಲೀಕರು ಹೈರಾಣಾಗಿದ್ದು, ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.















Leave a Reply