ನಕಲಿ ಐಎಎಸ್ ಅಧಿಕಾರಿ ವಂಚನೆ ಪ್ರಕರಣ: ಮಾಜಿ ಜಿಲ್ಲಾ ಸರ್ಜನ್ ವಿರುದ್ಧ ಮತ್ತೊಂದು ಕೇಸ್ ದಾಖಲು

Spread the love

ಚಿಕ್ಕಮಗಳೂರು: ಸರ್ಕಾರಿ ಟೆಂಡರ್ ಕೊಡಿಸುವುದಾಗಿ ನಂಬಿಸಿ ₹41 ಲಕ್ಷ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿರುವ ನಕಲಿ ಐಎಎಸ್ ಅಧಿಕಾರಿ ಮಿಥುನ್ ಮತ್ತು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮಾಜಿ ಸರ್ಜನ್ ಡಾ. ಚಂದ್ರಶೇಖರ್ ವಿರುದ್ಧ ಈಗ ಮತ್ತೊಂದು ಗಂಭೀರ ದೂರು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ. ಪ್ರೇಮಕುಮಾರ್ ಅವರಿಗೆ ಈ ಜೋಡಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ಸರ್ಜನ್ ಆಗಿದ್ದ ಡಾ. ಚಂದ್ರಶೇಖರ್ ಅವರು ಮಿಥುನ್ ಎಂಬಾತನನ್ನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಪರಿಚಯಿಸಿ, ಆತನ ತರಬೇತಿ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹಣದ ನೆರವು ನೀಡುವಂತೆ ಪ್ರೇಮಕುಮಾರ್ ಅವರ ಮೇಲೆ ಒತ್ತಡ ಹೇರಿದ್ದರು.  

​ತಮ್ಮ ಮೇಲಧಿಕಾರಿಯ ಮಾತನ್ನು ನಂಬಿದ ಡಾ. ಪ್ರೇಮಕುಮಾರ್ ಅವರು ಮಿಥುನ್‌ನ ಐಎಎಸ್ ತರಬೇತಿ ವೆಚ್ಚ, ಅನಾರೋಗ್ಯದ ಚಿಕಿತ್ಸೆ ಹಾಗೂ ಆತನ ಸಂಬಂಧಿಕರ ಮನೆ ನಿರ್ಮಾಣದ ಉದ್ದೇಶಕ್ಕಾಗಿ ಹಂತ ಹಂತವಾಗಿ ಸುಮಾರು ₹8,02,000 ಹಣವನ್ನು ನೀಡಿದ್ದರು. ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ನಡೆದ ‘ದಂತ ಭಾಗ್ಯ’ ಶಿಬಿರದ ವೆಚ್ಚವನ್ನೂ ಕೂಡ ದಾನಿಗಳಿಂದ ಹಣ ಬರುತ್ತದೆ ಎಂಬ ಸುಳ್ಳು ಭರವಸೆಯೊಂದಿಗೆ ಪ್ರೇಮಕುಮಾರ್ ಅವರ ಕೈಯಿಂದಲೇ ಪಾವತಿಸುವಂತೆ ಮಾಡಿ ವಂಚಿಸಲಾಗಿತ್ತು. ಮಿಥುನ್ ಐಎಎಸ್ ಅಧಿಕಾರಿಯೇ ಅಲ್ಲ ಎಂಬ ಸತ್ಯ ತಿಳಿದಿದ್ದರೂ ಡಾ. ಚಂದ್ರಶೇಖರ್ ಅವರು ಆತನೊಂದಿಗೆ ಶಾಮೀಲಾಗಿ ಈ ಸಂಚು ರೂಪಿಸಿರುವುದು ಈಗ ದೃಢಪಟ್ಟಿದೆ.

Leave a Reply

Your email address will not be published. Required fields are marked *