ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ನಡುವೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿಯಾದರೂ ರಾಜ್ಯದ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಮೂರು ವರ್ಷಗಳ ಹಿಂದೆ ಜನರು ಭರವಸೆಯಿಟ್ಟು ಕಾಂಗ್ರೆಸ್ಗೆ ಬಹುಮತ ನೀಡಿದ್ದರು, ಆದರೆ ಆಡಳಿತ ಪಕ್ಷವು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಬಿಜೆಪಿ ಅವಧಿಯಲ್ಲಿ ಶೇಕಡಾ 40 ರಷ್ಟು ಕಮಿಷನ್ ಇತ್ತು ಎಂದು ಆರೋಪಿಸಿದ್ದ ಕಾಂಗ್ರೆಸ್, ತಾವು ಅಧಿಕಾರಕ್ಕೆ ಬಂದರೆ ಅದನ್ನು ಶೂನ್ಯಕ್ಕೆ ಇಳಿಸುವುದಾಗಿ ಹೇಳಿತ್ತು. ಆದರೆ ಈಗ ಕಾಂಗ್ರೆಸ್ ಆಡಳಿತದಲ್ಲಿ ಲಂಚದ ಪ್ರಮಾಣ ಶೇಕಡಾ 60 ಕ್ಕೆ ಏರಿಕೆಯಾಗಿದೆ ಎಂದು ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂಪಾಯಿಗಳ ಬೃಹತ್ ಲೂಟಿ ನಡೆದಿದೆ ಎಂದು ಅವರು ದೂರಿದ್ದಾರೆ.
ರಾಜ್ಯ ಸರ್ಕಾರವು ಯಾವುದೇ ಅಭಿವೃದ್ಧಿ ಕೆಲಸಗಳಿಗಾಗಿ ಸುದ್ದಿಯಾಗುತ್ತಿಲ್ಲ, ಬದಲಿಗೆ ಪ್ರತಿದಿನ ಹೊಸ ಹಗರಣಗಳ ಮೂಲಕವೇ ಪ್ರಚಾರ ಪಡೆಯುತ್ತಿದೆ ಎಂದು ಅವರು ಕಟಕಟಿಸಿದ್ದಾರೆ. ಇಂದಿನ ಯುವಕರಿಗೆ ಉದ್ಯೋಗಗಳಿಲ್ಲದೆ ಹತಾಶರಾಗಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಅಂಗವಿಕಲರು ತಮ್ಮ ಮಾಸಾಶನ ಹೆಚ್ಚಿಸುವಂತೆ ದೊಡ್ಡ ಮಟ್ಟದ ಚಳುವಳಿ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಸರ್ಕಾರದಲ್ಲಿ ಮಾನವೀಯತೆ ಇಲ್ಲದಿರುವುದಕ್ಕೆ ವಿಕಲಚೇತನರು ಬೀದಿಗೆ ಇಳಿದು ಹೋರಾಟ ಮಾಡುತ್ತಿರುವುದೇ ಸಾಕ್ಷಿಯಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು, ಕೆಎಸ್ಆರ್ಟಿಸಿ ನೌಕರರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರಣಿ ಚಳುವಳಿಗಳನ್ನು ನಡೆಸುತ್ತಿದ್ದು, ಇದು ಸರ್ಕಾರದ ಮೇಲಿರುವ ಜನರ ಅತೃಪ್ತಿಯನ್ನು ತೋರಿಸುತ್ತದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಮತ್ತು ರಾಜ್ಯದ ಒಟ್ಟು ಸಾಲದ ಮೊತ್ತ 10 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಈ ಎಲ್ಲಾ ಆಡಳಿತ ವೈಫಲ್ಯಗಳಿಂದಾಗಿ ಜನರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದು, ಮುಂಬರುವ ದಿನಗಳಲ್ಲಿ ಇದೇ ಜನರೇ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ಖಚಿತ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.











Leave a Reply