ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇವಸ್ಥಾನದ ಬಳಿ ಮೈ ಜುಂ ಎನಿಸುವ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರು ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಈ ಘಟನೆಗೆ ಕಾರಣವಾಗಿದ್ದು, ಸ್ಕೂಟರ್‌ನಲ್ಲಿದ್ದ ದಂಪತಿ ಹಾಗೂ ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಟ್ಟಿಗೆಹಾರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಘಾಟಿಯ ಅಪಾಯಕಾರಿ ತಿರುವಿನಲ್ಲಿ ವೇಗವಾಗಿ ಬಂದು ನಿಯಂತ್ರಣ ತಪ್ಪಿದೆ. ಈ ವೇಳೆ ಎದುರುಗಡೆಯಿಂದ ಅಂದರೆ ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಸ್ಕೂಟರ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಗಂಡ, ಹೆಂಡತಿ ಮತ್ತು ಮಗು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಮಗುವಿಗೆ ಗಂಭೀರ ಗಾಯಗಳಾಗಿದ್ದು, ದಂಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡದ ಸದೃಶವಾಗಿ ಬದುಕುಳಿದಿದ್ದಾರೆ. ಸ್ಕೂಟರ್‌ಗೆ ಗುದ್ದಿದ ನಂತರವೂ ನಿಯಂತ್ರಣಕ್ಕೆ ಸಿಗದ ಕಾರು ರಸ್ತೆ ಬದಿಯ ಕಾಲುವೆಗೆ ಇಳಿದು ನಿಂತಿದೆ.
ಈ ಇಡೀ ಘಟನೆಯ ಲೈವ್ ದೃಶ್ಯಗಳು ಸ್ಕೂಟರ್ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಾಟ್ ಪ್ರದೇಶಗಳಂತಹ ಸೂಕ್ಷ್ಮ ರಸ್ತೆಗಳಲ್ಲಿ ಚಾಲಕರ ಇಂತಹ ಬೇಜವಾಬ್ದಾರಿತನದ ಚಾಲನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.














Leave a Reply