ಮಲೆನಾಡಿನಲ್ಲಿ ಮುಂದಿನ 3 ದಿನ ವರುಣನ ಆರ್ಭಟ; ಕಾಫಿನಾಡಿಗೆ ರೆಡ್ ಅಲರ್ಟ್ ಘೋಷಣೆ!

Spread the love

 

ಚಿಕ್ಕಮಗಳೂರು: ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ನೈಋತ್ಯ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾಫಿನಾಡು ಜಿಲ್ಲಾಡಳಿತವು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಹೈ ಅಲರ್ಟ್ ಘೋಷಿಸಿದೆ.

​ಜೂನ್ 9 ರಿಂದ ಜೂನ್ 11ರವರೆಗೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಲಿದ್ದು, ನಾಳೆ (ಜೂನ್ 9) ‘ಆರೆಂಜ್ ಅಲರ್ಟ್’ ಹಾಗೂ ಜೂನ್ 10 ಮತ್ತು 11ರಂದು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

​ಜಿಲ್ಲಾಡಳಿತದಿಂದ ಪ್ರಮುಖ ಮಾರ್ಗಸೂಚಿಗಳು ಮತ್ತು ಎಚ್ಚರಿಕೆಗಳು:

​ನದಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ: ಮಳೆಯ ಆರ್ಭಟಕ್ಕೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.

​ಪ್ರವಾಸಿಗರಿಗೆ ಹೈ ಅಲರ್ಟ್: ಮಲೆನಾಡಿನ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಾಗರೂಕರಾಗಿರಬೇಕು. ಜಲಪಾತ, ನದಿ ಹಾಗೂ ಅಪಾಯಕಾರಿ ತಿರುವುಗಳಿರುವ ಘಾಟಿ ಪ್ರದೇಶಗಳಿಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.

​ಮರಗಳ ಕೆಳಗೆ ನಿಲ್ಲಬೇಡಿ: ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮರಗಳ ಸಮೀಪ ಆಶ್ರಯ ಪಡೆಯಬಾರದು ಮತ್ತು ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿದೆ.

​ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ: ಮಳೆಯಿಂದ ಉಂಟಾಗಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ (ಹೆಡ್‌ಕ್ವಾರ್ಟರ್ಸ್) ಮೊಕ್ಕಾಂ ಹೂಡಬೇಕು ಮತ್ತು ಯಾವುದೇ ಪರಿಸ್ಥಿತಿಯನ್ನೂ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.

Leave a Reply

Your email address will not be published. Required fields are marked *