🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಜೆಸಿಬಿ ಘರ್ಜನೆ; ಅಕ್ರಮ ರಸ್ತೆ ನಿರ್ಮಾಣ, ಅದಿರು ಸಾಗಾಟ ಆರೋಪ!

---Advertisement---

 

​ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಶಿಖರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪರಿಸರ ಸೂಕ್ಷ್ಮ ವಲಯವಾಗಿರುವ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಶ್ಚಿಮ ಘಟ್ಟಗಳ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳು ಹಗಲಿರುಳು ಘರ್ಜಿಸುತ್ತಿದ್ದರೂ, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಶೋಲಾಕಾಡು, ಹುಲ್ಲುಗಾವಲು ಧ್ವಂಸ: ರೆಸಾರ್ಟ್‌ಗಳಿಗಾಗಿ ರಸ್ತೆ?

​ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಬರುವ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಶ್ರೇಣಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅತ್ಯಂತ ಅಪರೂಪದ ಶೋಲಾಕಾಡು ಹಾಗೂ ಹುಲ್ಲುಗಾವಲು ಪ್ರದೇಶಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಧ್ವಂಸಗೊಳಿಸಲಾಗುತ್ತಿದೆ. ಸ್ಥಳೀಯ ರೆಸಾರ್ಟ್ ಮತ್ತು ಹೋಮ್‌ಸ್ಟೇಗಳ ಲಾಬಿಗೆ ಮಣಿದು, ಅವರಿಗೆ ಅನುಕೂಲ ಮಾಡಿಕೊಡಲು ಈ ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

​ಅಕ್ರಮ ಅದಿರು, ಮಣ್ಣು ಸಾಗಾಟದ ಶಂಕೆ

​ರಸ್ತೆ ನಿರ್ಮಾಣದ ನೆಪದಲ್ಲಿ ಗುಡ್ಡಗಳನ್ನು ಬಗೆದು ಅಲ್ಲಿನ ಮಣ್ಣು ಮತ್ತು ಬೆಲೆಬಾಳುವ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸೂಕ್ಷ್ಮ ವಲಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ  ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.

​ಭೂಕುಸಿತದ ಭೀತಿ: ಮುಳ್ಳಯ್ಯನಗಿರಿ ಭಾಗವು ಅತ್ಯಂತ ಮೃದುವಾದ ಮಣ್ಣಿನ ಸ್ತರವನ್ನು ಹೊಂದಿದೆ. ಇಲ್ಲಿ ಭಾರೀ ಯಂತ್ರಗಳನ್ನು ಬಳಸಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕತ್ತರಿಸುತ್ತಿರುವುದರಿಂದ, ಮುಂಬರುವ ಮಳೆಗಾಲದಲ್ಲಿ ಭೀಕರ ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ.

​ಗಾಢ ನಿದ್ರೆಯಲ್ಲಿ ಅರಣ್ಯ ಇಲಾಖೆ!

​ಪ್ರಸ್ತಾಪಿತ ‘ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು’ (Mullayanagiri Conservation Reserve) ವ್ಯಾಪ್ತಿಯಲ್ಲೇ ಈ ಎಲ್ಲಾ ಅರಣ್ಯೇತರ ಚಟುವಟಿಕೆಗಳು ನಡೆಯುತ್ತಿವೆ. ಪರಿಸರ ಸೂಕ್ಷ್ಮ ವಲಯದಲ್ಲಿ ಇಂತಹ ಧ್ವಂಸ ಕಾರ್ಯ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಗಾಢ ನಿದ್ರೆಯಲ್ಲಿದೆ ಎಂದು ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ.

Join WhatsApp

Join Now

Join Telegram

Join Now

Leave a Comment