ಆಲ್ದೂರು ಪಟ್ಟಣದಲ್ಲಿ ಕಾಡಾನೆಗಳ ಅಟ್ಟಹಾಸ: ಸರ್ಕಾರಿ ಕಾಲೇಜು ಗೇಟ್ ಧ್ವಂಸ, ಇಡೀ ರಾತ್ರಿ ಜಾಗರಣೆ ಕುಳಿತ ಜನ!

Spread the love

 

​ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳು ಇಡೀ ರಾತ್ರಿ ಸಾರ್ವಜನಿಕರನ್ನು ಭೀತಿಯಲ್ಲಿ ಮುಳುಗಿಸಿವೆ. ಆನೆಗಳ ಓಡಾಟದಿಂದಾಗಿ ಪಟ್ಟಣದ ನಿವಾಸಿಗಳು ನಿದ್ದೆಯಿಲ್ಲದೆ ಇಡೀ ರಾತ್ರಿ ಜಾಗರಣೆ ನಡೆಸುವಂತಾಗಿದೆ.

​ಕಾಲೇಜು ಗೇಟ್ ಧ್ವಂಸ, ಮನೆ ಅಂಗಳಕ್ಕೆ ನುಗ್ಗಲು ಯತ್ನ:

​ಆಲ್ದೂರು ಪಟ್ಟಣಕ್ಕೆ ತಡರಾತ್ರಿ ನುಗ್ಗಿದ ಎರಡು ಕಾಡಾನೆಗಳು ತೀವ್ರ ಆತಂಕ ಸೃಷ್ಟಿಸಿವೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೇಟ್ ಮುರಿದು ಒಳ ನುಗ್ಗಿದ ಆನೆಗಳು, ಕಾಲೇಜು ಆವರಣದಲ್ಲಿ ಕೆಲಕಾಲ ಅರಚಾಡಿ ಧ್ವಂಸ ಕೃತ್ಯ ನಡೆಸಿವೆ. ಅಷ್ಟೇ ಅಲ್ಲದೆ, ಪಟ್ಟಣದ ಕೆಲವು ವಸತಿ ಪ್ರದೇಶಗಳಿಗೂ ನುಗ್ಗಿದ ಆನೆಗಳು, ಮನೆಗಳ ಗೇಟ್ ಮುರಿದು ಅಂಗಳಕ್ಕೆ ನುಗ್ಗಲು ಯತ್ನಿಸಿವೆ. ಇದರಿಂದಾಗಿ ಮನೆಯೊಳಗಿದ್ದ ನಿವಾಸಿಗಳು ಭಯದಿಂದ ಬೆಚ್ಚಿಬಿದ್ದಿದ್ದಾರೆ.

​ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ:

​ಪಟ್ಟಣದ ಪ್ರಮುಖ ರಸ್ತೆ ಹಾಗೂ ವಸತಿ ಪ್ರದೇಶಗಳಲ್ಲಿ ಕಾಡಾನೆಗಳು ಮುಕ್ತವಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಆಲ್ದೂರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿಗಳು ಮಧ್ಯರಾತ್ರಿಯೇ ಸ್ಥಳಕ್ಕೆ ಧಾವಿಸಿದ್ದಾರೆ.

​ಸ್ಥಳೀಯರ ಸಹಕಾರದೊಂದಿಗೆ ತೀವ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು, ಪಟಾಕಿ ಸಿಡಿಸಿ ಕೊನೆಗೂ ಕಾಡಾನೆಗಳನ್ನು ಪಟ್ಟಣದಿಂದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೆಗಳು ಕಾಡು ಸೇರಿದ ಬಳಿಕ ಆಲ್ದೂರು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

​ನಿಲ್ಲದ ಆನೆ ಭೀತಿ:

​ಆನೆಗಳನ್ನು ಸದ್ಯಕ್ಕೆ ಕಾಡಿಗಟ್ಟಲಾಗಿದ್ದರೂ, ಇವು ಮತ್ತೆ ಯಾವಾಗ ಪಟ್ಟಣಕ್ಕೆ ಲಗ್ಗೆ ಇಡುತ್ತವೋ ಎಂಬ ಭೀತಿ ಆಲ್ದೂರು ಗ್ರಾಮಸ್ಥರನ್ನು ಕಾಡುತ್ತಿದೆ. ಕಾಡಾನೆಗಳ ಹಾವಳಿಗೆ ಶಾಶ್ವತ ಮುಕ್ತಿ ಹಾಡಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *