ಚಿಕ್ಕಮಗಳೂರು : ಶ್ರೀ ಮಹಾ ಪ್ರತ್ಯಂಗಿರಾ ಅಮ್ಮನವರ ದೈವಿಕ ಪ್ರೇರಣೆ ಹಾಗೂ ಸದ್ಗುರುಗಳ ಅನುಗ್ರಹದಿಂದ ಅಪಾರ ಶಕ್ತಿ ಉಳ್ಳ ಶಿವಶಕ್ತಿ ಐಕ್ಯ ಸ್ವರೂಪಿಣಿ ಜಗನ್ಮಾತೆ ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ಪುನರ್ ಪ್ರತಿಷ್ಠಾಪನಾ ನೂತನ ಶಿಲಾಮಯ ದೇವಾಲಯವು ಚಿಕ್ಕಮಗಳೂರು ನಗರದ ದೀಪಾ ನರ್ಸಿಂಗ್ ಹೋಂ ಡೌನ್, ಬೈಪಾಸ್ ರಸ್ತೆಯಲ್ಲಿ ಭಕ್ತಾದಿಗಳ ಸಹಕಾರದಿಂದ ನಿರ್ಮಾಣವಾಗುತ್ತಿದೆ.
ಈ ದೇವಾಲಯವು ಭಕ್ತರ ಭಕ್ತಿ, ನಂಬಿಕೆ ಹಾಗೂ ಧಾರ್ಮಿಕ ಸೇವೆಯ ಪ್ರತೀಕವಾಗಿ ರೂಪುಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ದೇವಿಯ ಅನುಗ್ರಹದಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಜಾಗೃತಿ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ದೇವಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ದೇವಾಲಯ ನಿರ್ಮಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಶಾಂತಿನಗರ ನಿವಾಸಿಗಳಾದ ನಗರಸಭೆಯ ಮಾಜಿ ಅಧ್ಯಕ್ಷರಾದ ಮುತ್ತಯ್ಯ ಹಾಗೂ ಅವರ ಪುತ್ರ ಸಂತೋಷ್ ಮತ್ತು ತಂಡದವರು ಅಮೂಲ್ಯವಾದ 5 ಗುಂಟೆ ಜಾಗವನ್ನು ದಾನವಾಗಿ ನೀಡಿರುವುದು ವಿಶೇಷವಾಗಿದೆ. ಇದಲ್ಲದೆ ದೇವಾಲಯಕ್ಕೆ ರಸ್ತೆ ಸಂಪರ್ಕಕ್ಕಾಗಿ ಹಾಗೂ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ದೈವಿಕ ಕಾರ್ಯಕ್ಕೆ ಕೈಜೋಡಿಸಿ ಅಮ್ಮನವರ ಕೃಪೆಗೆ ಪಾತ್ರರಾಗಿದ್ದಾರೆ.
ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣದ ಅಂಗವಾಗಿ ಶಬರಿಮಲೆಯ ತಂತ್ರ ಬ್ರಹ್ಮಶ್ರೀ, ತಂತ್ರ ರತ್ನಂ ಕೆ. ಜಯರಾಮ್ ನಂಬೂದರಿಯವರ ಮಾರ್ಗದರ್ಶನದಲ್ಲಿ ವೈದಿಕ ಹಾಗೂ ತಾಂತ್ರಿಕ ಧಾರ್ಮಿಕ ವಿಧಿ ವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಕೇರಳ ಶೈಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳ ಶುದ್ಧಿ, ಅಷ್ಟದಿಕ್ಪಾಲಕರ ಪೂಜೆ, ಭೂ ಪೂಜೆ ಹಾಗೂ ವಿವಿಧ ಹೋಮ ಹವನಗಳು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದವು.
ಈ ಸಂದರ್ಭದಲ್ಲಿ ಆಶಯನುಡಿಗಳನ್ನಾಡಿದ ಶ್ರೀ ಮಹಾ ಪ್ರತ್ಯಂಗಿರಾ ದೇವಿ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರೇಶ್ ಚಿಕ್ಕಮಗಳೂರು ನಗರದ ಆಧ್ಯಾತ್ಮಿಕ ವೈಭವಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಆದಿಶಕ್ತಿ ಸ್ವರೂಪಿಣಿ, ಅಪಾರ ದೈವಿಕ ಶಕ್ತಿಯ ಅಧಿಷ್ಠಾತೃ ದೇವಿಯಾಗಿರುವ ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ನೂತನ ಶಿಲಾಮಯ ದೇವಾಲಯ ಅಂದಾಜು 1.8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಗರದ ಬೈಪಾಸ್ ರಸ್ತೆಯ ದೀಪಾ ನರ್ಸಿಂಗ್ ಹೋಂ ಸಮೀಪ ಭಕ್ತರ ಸಹಕಾರದೊಂದಿಗೆ ಭರದಿಂದ ಸಾಗುತ್ತಿದೆ. ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ಭಕ್ತರ ಆತ್ಮಶಾಂತಿ, ಧೈರ್ಯ ಮತ್ತು ಆಧ್ಯಾತ್ಮಿಕ ಚೈತನ್ಯದ ಸಂಕೇತವಾಗಲಿದೆ. ಎಂದು ಹೇಳಿದರು. ಶ್ರೀ ಮಹಾ ಪ್ರತ್ಯಂಗಿರಾ ದೇವಿ ಟ್ರಸ್ಟ್‌ನ ಅಧ್ಯಕ್ಷರು, ನಿರ್ದೇಶಕರು, ಟ್ರಸ್ಟಿನ ಸದಸ್ಯರು, ಕುಟುಂಬ ವರ್ಗದವರು ಹಾಗೂ ದಂಟರಮಕ್ಕಿ ಗ್ರಾಮಸ್ಥರು ಉಪಸ್ಥಿತರಿದ್ದು ದೇವಾಲಯ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತಾದಿಗಳು ತನು, ಮನ, ಧನ ಸಹಕಾರ ನೀಡಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕೆಂದು ಟ್ರಸ್ಟ್ ವತಿಯಿಂದ ಮನವಿ ಮಾಡಲಾಗಿದೆ. ಧಾರ್ಮಿಕ ಸೇವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ಜೀವನದಲ್ಲಿ ದೇವಿಯ ಆಶೀರ್ವಾದ ಸದಾ ಇರಲಿ ಎಂಬುದು ಭಕ್ತರ ಆಶಯವಾಗಿದೆ.
















Leave a Reply