ಪುಟಾಣಿಗಳ ಜೀವದ ಜೊತೆ ಚೆಲ್ಲಾಟ?: ಪ್ಲೇ ಹೋಮ್ ಶಾಲಾ ವಾಹನ ಪಲ್ಟಿ – ಪೋಷಕರ ಕಿಡಿ

Spread the love

 

 

ಚಿಕ್ಕಮಗಳೂರು: ನಿಯಮಗಳನ್ನು ಗಾಳಿಗೆ ತೂರಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ಬೇಜವಾಬ್ದಾರಿಯಿಂದಾಗಿ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದ ಬಳಿ ಸಂಭವಿಸಿದೆ. ಕೂದುವಳ್ಳಿಯ ‘ಲಿಟಲ್ ಫ್ಲವರ್’ ಪ್ಲೇ ಹೋಮ್‌ಗೆ ಸೇರಿದ ಈ ಓಮಿನಿ ಕಾರಿನಲ್ಲಿ ಅಪಘಾತದ ಸಮಯದಲ್ಲಿ 12 ಮುಗ್ಧ ಮಕ್ಕಳಿದ್ದರು ಎಂದು ತಿಳಿದುಬಂದಿದೆ. ಮಕ್ಕಳನ್ನು ಕರೆದೊಯ್ಯಲು ಕಮರ್ಷಿಯಲ್ ವಾಹನಗಳನ್ನೇ ಬಳಸಬೇಕು, ವೈಟ್ ಬೋರ್ಡ್ (ಸ್ವಂತ ಬಳಕೆಯ) ವಾಹನಗಳನ್ನು ಬಳಸಬಾರದು ಎಂಬ ಕಠಿಣ ನಿಯಮವಿದ್ದರೂ, ಈ ಪ್ಲೇ ಹೋಮ್ ಆಡಳಿತ ಮಂಡಳಿ ಕಳೆದ ಹಲವು ವರ್ಷಗಳಿಂದ ಇದೇ ಕಾರಿನಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿತ್ತು ಎನ್ನಲಾಗಿದೆ.

ಇದಷ್ಟೇ ಅಲ್ಲದೆ, ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ಕನಿಷ್ಠ ಚಾಲನಾ ಪರವಾನಗಿಯೂ (DL) ಇರಲಿಲ್ಲ ಎಂಬ ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಕೇವಲ ಇತ್ತೀಚೆಗಷ್ಟೇ ಎಲ್ಎಲ್ಆರ್ (LLR) ಪಡೆದುಕೊಂಡಿದ್ದ ಚಾಲಕನಿಗೆ ಮಕ್ಕಳಿದ್ದ ವಾಹನ ನೀಡಿದ್ದೇ ಈ ದುರ್ಘಟನೆಗೆ ನೇರ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಾಹನದ ಇನ್ಸೂರೆನ್ಸ್ ಕೂಡ ಲ್ಯಾಪ್ಸ್ ಆಗಿರುವುದು ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಪೋಷಕರು ಸ್ಥಳಕ್ಕೆ ದೌಡಾಯಿಸಿದ್ದು, ಪ್ಲೇ ಹೋಮ್‌ನ ಸಿಸ್ಟರ್ಸ್‌ಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಿಯಮ ಮೀರಿ, ಮಕ್ಕಳ ಪ್ರಾಣವನ್ನು ಪಣಕ್ಕಿಟ್ಟು ವಾಹನ ಚಲಾಯಿಸಲು ಬಿಟ್ಟ ಪ್ಲೇ ಹೋಮ್ ಆಡಳಿತ ಮಂಡಳಿ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಸದ್ಯ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *