मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಗ್ಯಾಸ್ ಲಾರಿ, ತಪ್ಪಿದ ಭಾರೀ ಅನಾಹುತ

 

ಚಿಕ್ಕಮಗಳೂರು ನಗರದ ಹೊರವಲಯದ ಹಿರೇಕೊಳಲೆ ರಸ್ತೆಯಲ್ಲಿ ಗ್ಯಾಸ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ನಡೆದಿದೆ.

ಗ್ಯಾಸ್ ಗೋಡೌನ್‌ಗೆ ತೆರಳುತ್ತಿದ್ದ ಪೂರ್ಣ ಪ್ರಮಾಣದ ಗ್ಯಾಸ್ ಸಿಲಿಂಡರ್‌ಗಳ ಲೋಡ್ ಹೊತ್ತ ಲಾರಿ, ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಚರಂಡಿಯಲ್ಲಿ ನಿಂತಿದೆ. ಲಾರಿಯ ಒಂದು ಬದಿಯ ಚಕ್ರ ಚರಂಡಿಯಲ್ಲಿ ಗಟ್ಟಿಯಾಗಿ ಸಿಲುಕಿಕೊಂಡ ಪರಿಣಾಮ ವಾಹನ ಸಂಪೂರ್ಣ ಪಲ್ಟಿಯಾಗದೇ ಬಾಗಿದ ಸ್ಥಿತಿಯಲ್ಲೇ ನಿಂತಿದೆ.

ಲಾರಿ ಸಂಪೂರ್ಣ ಪಲ್ಟಿಯಾಗಿದ್ದರೆ ವಿದ್ಯುತ್ ಕಂಬ ಮುರಿದು ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಚಕ್ರ ಚರಂಡಿಯಲ್ಲಿ ಸಿಲುಕಿಕೊಂಡ ಕಾರಣ ಬಾರಿ  ದುರಂತವು ಕೂದಲೆಳೆ ಅಂತರದಲ್ಲಿ ತಪ್ಪಿದೆ.ಘಟನೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು,

 

ಮಗಳ ಅಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ – ಇಬ್ಬರು ಆರೋಪಿಗಳ ಬಂಧನ

 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಯೊಬ್ಬರಿಗೆ ಅವರ 25 ವರ್ಷದ ಮಗಳ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಕ್ಷಯ್ ಹಾಗೂ ಸಾಹುಲ್ ಎಂದು ಗುರುತಿಸಲಾಗಿದೆ. ಇವರು ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಬೆಂಗಳೂರು ಮೂಲದ “ಯೋಗೀಶ್” ಎಂಬ ಹೆಸರಿನಲ್ಲಿ ಕರೆ ಮಾಡಿ ಮಹಿಳೆಯನ್ನು ಸಂಪರ್ಕಿಸುತ್ತಿದ್ದರು ಎನ್ನಲಾಗಿದೆ.

ಮಹಿಳೆಯ ಮಗಳ ಅಶ್ಲೀಲ ಫೋಟೋಗಳನ್ನು ಕಳುಹಿಸಿ, ಹಣ ನೀಡದಿದ್ದರೆ ಫೋಟೋಗಳನ್ನು ಫೇಸ್‌ಬುಕ್, ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಪ್ರತಿದಿನ ರಾತ್ರಿ ಕರೆ ಮಾಡಿ ಹಣ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.

ಇದರಿಂದ ಆತಂಕಗೊಂಡ ಮಹಿಳೆ ಲಕ್ಕವಳ್ಳಿ ಪೊಲೀಸ್ ಠಾಣೆ ಹಾಗೂ ಚಿಕ್ಕಮಗಳೂರು ಸಿಇಎನ್ (Cyber, Economic and Narcotics) ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದರು.ಪೊಲೀಸರ  ಕಾರ್ಯಾಚರಣೆಯಿಂದ ಪ್ರಕರಣ ದಾಖಲಾಗಿದ 24 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಲಕ್ಕವಳ್ಳಿ ಮತ್ತು ಚಿಕ್ಕಮಗಳೂರು ಸಿಇಎನ್ ಠಾಣೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ

 

ಮೂಡಿಗೆರೆ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟಿಯಲ್ಲಿ ಕಲ್ಲುಗಳು ಜರಿಯಲಾರಂಭಿಸಿದ್ದು, ಮುಂಗಾರು ಮಳೆಯ ಆರಂಭದಲ್ಲೇ ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.

​ಘಾಟಿಯ ಬಿದಿರುತಳ ಬಸ್ ನಿಲ್ದಾಣದ ಸಮೀಪವಿರುವ ಎತ್ತರದ ಗುಡ್ಡದಿಂದ ರಸ್ತೆ ಪಕ್ಕಕ್ಕೆ ಸಣ್ಣ ಪ್ರಮಾಣದಲ್ಲಿ ಕಲ್ಲುಗಳು ಕುಸಿದು ಬಿದ್ದಿವೆ. ಕಳೆದ ಒಂದು ತಿಂಗಳಿನಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮುಂಗಾರು ಪೂರ್ವ ಮಳೆ ಸುರಿದಿದ್ದರಿಂದ, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಲ್ಲುಗಳು ಜರಿದ ಸಮಯದಲ್ಲಿ ಯಾವುದೇ ವಾಹನಗಳು ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದ್ದು, ಸದ್ಯ ವಾಹನ ಸಂಚಾರ ಎಂದಿನಂತೆ ಮುಂದುವರಿದಿದೆ.

​ಈಗಷ್ಟೇ ಮುಂಗಾರು ಮಳೆಗಾಲ ಶುರುವಾಗಿದ್ದು, ಮುಂದಿನ ಮೂರು ತಿಂಗಳುಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಚಾರ್ಮಾಡಿ ಘಾಟ್ ಒಳಗೊಂಡಂತೆ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಆತಂಕ ದಟ್ಟವಾಗಿದೆ.

ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗುತ್ತಿದೆ ಕೇರಳ ಶೈಲಿಯ ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ದಿವ್ಯ ಶಿಲಾಮಯ ದೇವಾಲಯ

 

ಚಿಕ್ಕಮಗಳೂರು : ಶ್ರೀ ಮಹಾ ಪ್ರತ್ಯಂಗಿರಾ ಅಮ್ಮನವರ ದೈವಿಕ ಪ್ರೇರಣೆ ಹಾಗೂ ಸದ್ಗುರುಗಳ ಅನುಗ್ರಹದಿಂದ ಅಪಾರ ಶಕ್ತಿ ಉಳ್ಳ ಶಿವಶಕ್ತಿ ಐಕ್ಯ ಸ್ವರೂಪಿಣಿ ಜಗನ್ಮಾತೆ ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ಪುನರ್‌ ಪ್ರತಿಷ್ಠಾಪನಾ ನೂತನ ಶಿಲಾಮಯ ದೇವಾಲಯವು ಚಿಕ್ಕಮಗಳೂರು ನಗರದ ದೀಪಾ ನರ್ಸಿಂಗ್ ಹೋಂ ಡೌನ್, ಬೈಪಾಸ್ ರಸ್ತೆಯಲ್ಲಿ ಭಕ್ತಾದಿಗಳ ಸಹಕಾರದಿಂದ ನಿರ್ಮಾಣವಾಗುತ್ತಿದೆ.

ಈ ದೇವಾಲಯವು ಭಕ್ತರ ಭಕ್ತಿ, ನಂಬಿಕೆ ಹಾಗೂ ಧಾರ್ಮಿಕ ಸೇವೆಯ ಪ್ರತೀಕವಾಗಿ ರೂಪುಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ದೇವಿಯ ಅನುಗ್ರಹದಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಜಾಗೃತಿ ವೃದ್ಧಿಯಾಗಲಿ ಎಂಬ ಉದ್ದೇಶದಿಂದ ದೇವಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ದೇವಾಲಯ ನಿರ್ಮಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಶಾಂತಿನಗರ ನಿವಾಸಿಗಳಾದ ನಗರಸಭೆಯ ಮಾಜಿ ಅಧ್ಯಕ್ಷರಾದ ಮುತ್ತಯ್ಯ ಹಾಗೂ ಅವರ ಪುತ್ರ ಸಂತೋಷ್ ಮತ್ತು ತಂಡದವರು ಅಮೂಲ್ಯವಾದ 5 ಗುಂಟೆ ಜಾಗವನ್ನು ದಾನವಾಗಿ ನೀಡಿರುವುದು ವಿಶೇಷವಾಗಿದೆ. ಇದಲ್ಲದೆ ದೇವಾಲಯಕ್ಕೆ ರಸ್ತೆ ಸಂಪರ್ಕಕ್ಕಾಗಿ ಹಾಗೂ ವಿದ್ಯುತ್‌ ಸೌಲಭ್ಯ ಒದಗಿಸುವ ಮೂಲಕ ದೈವಿಕ ಕಾರ್ಯಕ್ಕೆ ಕೈಜೋಡಿಸಿ ಅಮ್ಮನವರ ಕೃಪೆಗೆ ಪಾತ್ರರಾಗಿದ್ದಾರೆ.

ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣದ ಅಂಗವಾಗಿ ಶಬರಿಮಲೆಯ ತಂತ್ರ ಬ್ರಹ್ಮಶ್ರೀ, ತಂತ್ರ ರತ್ನಂ ಕೆ. ಜಯರಾಮ್ ನಂಬೂದರಿಯವರ ಮಾರ್ಗದರ್ಶನದಲ್ಲಿ ವೈದಿಕ ಹಾಗೂ ತಾಂತ್ರಿಕ ಧಾರ್ಮಿಕ ವಿಧಿ ವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಕೇರಳ ಶೈಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಥಳ ಶುದ್ಧಿ, ಅಷ್ಟದಿಕ್ಪಾಲಕರ ಪೂಜೆ, ಭೂ ಪೂಜೆ ಹಾಗೂ ವಿವಿಧ ಹೋಮ ಹವನಗಳು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದವು.

ಈ ಸಂದರ್ಭದಲ್ಲಿ ಆಶಯನುಡಿಗಳನ್ನಾಡಿದ ಶ್ರೀ ಮಹಾ ಪ್ರತ್ಯಂಗಿರಾ ದೇವಿ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರೇಶ್ ಚಿಕ್ಕಮಗಳೂರು ನಗರದ ಆಧ್ಯಾತ್ಮಿಕ ವೈಭವಕ್ಕೆ ಮತ್ತೊಂದು ಮಹತ್ವದ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಆದಿಶಕ್ತಿ ಸ್ವರೂಪಿಣಿ, ಅಪಾರ ದೈವಿಕ ಶಕ್ತಿಯ ಅಧಿಷ್ಠಾತೃ ದೇವಿಯಾಗಿರುವ ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ನೂತನ ಶಿಲಾಮಯ ದೇವಾಲಯ ಅಂದಾಜು 1.8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಗರದ ಬೈಪಾಸ್ ರಸ್ತೆಯ ದೀಪಾ ನರ್ಸಿಂಗ್ ಹೋಂ ಸಮೀಪ ಭಕ್ತರ ಸಹಕಾರದೊಂದಿಗೆ ಭರದಿಂದ ಸಾಗುತ್ತಿದೆ. ಈ ದೇವಾಲಯವು ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ಭಕ್ತರ ಆತ್ಮಶಾಂತಿ, ಧೈರ್ಯ ಮತ್ತು ಆಧ್ಯಾತ್ಮಿಕ ಚೈತನ್ಯದ ಸಂಕೇತವಾಗಲಿದೆ.‌ ಎಂದು ಹೇಳಿದರು. ಶ್ರೀ ಮಹಾ ಪ್ರತ್ಯಂಗಿರಾ ದೇವಿ ಟ್ರಸ್ಟ್‌ನ ಅಧ್ಯಕ್ಷರು, ನಿರ್ದೇಶಕರು, ಟ್ರಸ್ಟಿನ ಸದಸ್ಯರು, ಕುಟುಂಬ ವರ್ಗದವರು ಹಾಗೂ ದಂಟರಮಕ್ಕಿ ಗ್ರಾಮಸ್ಥರು ಉಪಸ್ಥಿತರಿದ್ದು ದೇವಾಲಯ ನಿರ್ಮಾಣ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.

ಶ್ರೀ ಮಹಾ ಪ್ರತ್ಯಂಗಿರಾ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತಾದಿಗಳು ತನು, ಮನ, ಧನ ಸಹಕಾರ ನೀಡಿ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕೆಂದು ಟ್ರಸ್ಟ್ ವತಿಯಿಂದ ಮನವಿ ಮಾಡಲಾಗಿದೆ. ಧಾರ್ಮಿಕ ಸೇವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ಜೀವನದಲ್ಲಿ ದೇವಿಯ ಆಶೀರ್ವಾದ ಸದಾ ಇರಲಿ ಎಂಬುದು ಭಕ್ತರ ಆಶಯವಾಗಿದೆ.

ರಸ್ತೆಗೆ ಬಂದ ನಾಗರಹಾವು; ಬೈಕ್-ಸರ್ಕಾರಿ ಬಸ್ ನಡುವೆ ಅಪಘಾತ, ತಪ್ಪಿದ ಭಾರಿ ಅನಾಹುತ!

 

​ಅಜ್ಜಂಪುರ: ರಸ್ತೆಯಲ್ಲಿ ದಿಢೀರನೆ ಪ್ರತ್ಯಕ್ಷವಾದ ನಾಗರಹಾವೊಂದನ್ನು ಕಂಡು ಬೈಕ್ ಸವಾರ ಬ್ರೇಕ್ ಹಾಕಿದ ಪರಿಣಾಮ, ಹಿಂದಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದ  ಘಟನೆಯೊಂದು ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಬೈಕ್ ಸವಾರ ಹಾಗೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

​ನಾರಾಯಣಪುರ ಗ್ರಾಮದ ರಸ್ತೆಯಲ್ಲಿ ಬೈಕ್ ಸವಾರ ಚಲಿಸುತ್ತಿದ್ದಾಗ ಹಾವೊಂದು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ತಕ್ಷಣವೇ ಸವಾರ ಹಾವನ್ನು ರಕ್ಷಿಸಲು ಮತ್ತು ತಾನು ಬದಲಿ ದಾರಿ ಮಾಡಿಕೊಳ್ಳಲು ಬೈಕ್ ನಿಲ್ಲಿಸಿದ್ದಾನೆ. ಆದರೆ, ಇದೇ ವೇಳೆ ಬೈಕ್‌ನ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್ ಚಾಲಕನಿಗೆ ದಿಢೀರನೆ ಬೈಕ್ ನಿಂತಿರುವುದು ಕಂಡುಬಂದಿದೆ.

​ಬೈಕ್ ಸವಾರನನ್ನು ಹಾಗೂ ಬೈಕನ್ನು ತಪ್ಪಿಸಲು ಬಸ್ ಚಾಲಕ ತಕ್ಷಣವೇ ಬ್ರೇಕ್ ಒತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಅದೇ ಸಮಯದಲ್ಲಿ ಬಸ್ಸಿನ ಬ್ರೇಕ್ ಬ್ಲೇಡ್ ಕಟ್ ಆಗಿದೆ. ನಿಯಂತ್ರಣ ತಪ್ಪಿದ ಬಸ್ ನೇರವಾಗಿ ಬೈಕಿಗೆ ಡಿಕ್ಕಿ ಹೊಡೆದು, ರಸ್ತೆ ಪಕ್ಕದ ತೋಟಕ್ಕೆ ನುಗ್ಗಿದೆ.

​ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುವ ಸಾಧ್ಯತೆ ಇತ್ತು. ಒಂದು ವೇಳೆ ಲೈಟ್ ಕಂಬಕ್ಕೆ ಡಿಕ್ಕಿಯಾಗಿದ್ದರೆ ಭಾರಿ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ, ಬಸ್ ಚಾಲಕ ಅತ್ಯಂತ ಚಾಣಾಕ್ಷತನದಿಂದ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಕಂಬಕ್ಕೆ ಡಿಕ್ಕಿಯಾಗದಂತೆ ನಿಯಂತ್ರಿಸಿ ತೋಟದ ಕಡೆಗೆ ತಿರುಗಿಸಿದ್ದಾರೆ. ಇದರಿಂದಾಗಿ ಭಾರಿ ಜಸ್ಟ್ ಮಿಸ್ ಆಗಿದೆ.

 ಸರ್ಕಾರಿ ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಭೀತಿಯಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದರು.

​ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಮಿಳು ಕಾಲೋನಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; 8ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿ, ನಗದು ಕಳವು!

ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಅಕ್ಸ ಮಸೀದಿ ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎಂಟಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಪುಡಿಗೈದು, ಒಳಗಿದ್ದ ನಗದನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳು ಕಾಲೋನಿಯ ಲಾರಿ ಸ್ಟ್ಯಾಂಡ್ ಸಮೀಪದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಮಾಲೀಕರು ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದಾಗ ಟಾಟಾ ಏಸ್ ಸೇರಿದಂತೆ ಹಲವು ವಾಹನಗಳ ಮುಂಭಾಗದ ಗಾಜುಗಳು ಜಖಂಗೊಂಡಿರುವುದು ಕಂಡುಬಂದಿದೆ. ಕಿಡಿಗೇಡಿಗಳು ವಾಹನಗಳ ಗಾಜುಗಳನ್ನು ಒಡೆದು ಮಾತ್ರವಲ್ಲದೆ, ಡ್ಯಾಶ್‌ಬೋರ್ಡ್‌ಗಳನ್ನು ಜಖಂಗೊಳಿಸಿ ಒಳಗಿದ್ದ ಹಣವನ್ನು ದೋಚಿರುವ ಆರೋಪ ಕೇಳಿಬಂದಿದೆ.

ಸಂತ್ರಸ್ತ ವಾಹನ ಮಾಲೀಕರೊಬ್ಬರ ಪ್ರಕಾರ, ಟಾಟಾ ಏಸ್ ವಾಹನದಲ್ಲಿದ್ದ ಸುಮಾರು 25 ಸಾವಿರ ರೂ. ವ್ಯಾಪಾರದ ಹಣ ಕಳ್ಳರ ಪಾಲಾಗಿದೆ. ದುಡಿಮೆಯ ಹಣ ಕಳೆದುಕೊಂಡಿರುವ ಚಾಲಕರು ಮತ್ತು ವಾಹನ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಇಂತಹ ಕೃತ್ಯಗಳು ಹೊಸದಲ್ಲ. ಈ ಹಿಂದೆ ಕೂಡ ಹಲವು ಬಾರಿ ವಾಹನಗಳ ಗಾಜು ಒಡೆಯುವ ಘಟನೆಗಳು ನಡೆದಿದ್ದು, ಕಿಡಿಗೇಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ನಿಂತಿರುವ ಗುಜರಿ ಹಾಗೂ ಬಳಕೆಯಲ್ಲಿಲ್ಲದ ವಾಹನಗಳು ಸಮಾಜಘಾತುಕ ಚಟುವಟಿಕೆಗಳಿಗೆ ತಾಣವಾಗಿವೆ ಎಂಬ ಆರೋಪವೂ ಕೇಳಿಬಂದಿದೆ

ಎರಡು ಎತ್ತುಗಳನ್ನು ಬಲಿ ಪಡೆದ ತೆರೆದ ಬಾವಿ  

 

 

ಚಿಕ್ಕಮಗಳೂರು: ತೆರೆದ ಬಾವಿಯೊಂದು ಎರಡು ಎತ್ತುಗಳ ಜೀವ ಬಲಿ ಪಡೆದ ದಾರುಣ ಘಟನೆ ಶೃಂಗೇರಿ ತಾಲೂಕಿನ ಹಲಗಾರ್ ಆಲಂದೂರು ಗ್ರಾಮದಲ್ಲಿ ನಡೆದಿದೆ. ಮೇಯಲು ತೆರಳಿದ್ದ ಎತ್ತುಗಳು ಸುಮಾರು 20 ಅಡಿ ಆಳದ ಬಾವಿಗೆ ಬಿದ್ದು, ಒಳಗಿದ್ದ ಕೆಸರಿನಲ್ಲಿ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಿದ್ದವು.

ಎತ್ತುಗಳ ನರಳಾಟ ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಎತ್ತುಗಳನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರು. ಆದರೆ ಬಾವಿಯೊಳಗಿನ ಕೆಸರಿನಲ್ಲಿ ಸಿಲುಕಿ ಉಸಿರುಗಟ್ಟಿದ್ದ ಕಾರಣ, ಸಿಬ್ಬಂದಿಯ ನಿರಂತರ ಪ್ರಯತ್ನಗಳ ನಡುವೆಯೂ ಎರಡೂ ಎತ್ತುಗಳನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಈ ದುರಂತದ ಬಳಿಕ ಕಾಲುದಾರಿಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ತೆರೆದ ಬಾವಿಗಳನ್ನು ಕೂಡಲೇ ಮುಚ್ಚುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಯಿಗೆ ಮಗಳ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ…!

 

 

ಚಿಕ್ಕಮಗಳೂರು: ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭಾಗದಲ್ಲಿ ಬೆಳಕಿಗೆ ಬಂದಿದೆ. ಲಕ್ಕವಳ್ಳಿ ಮೂಲದ ಮಹಿಳೆಯೊಬ್ಬರ 25 ವರ್ಷದ ಮಗಳ ಅಶ್ಲೀಲ ಫೋಟೋಗಳನ್ನು ಕಳುಹಿಸಿದ ಆರೋಪಿಯು, ಹಣ ನೀಡದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಬೆಂಗಳೂರು ಮೂಲದ ಯೋಗೀಶ್ ಎಂದು ಗುರುತಿಸಲಾಗಿದೆ. ಮಹಿಳೆಯ ಮೊಬೈಲ್‌ಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿದ ಯೋಗೀಶ್, ನಂತರ ರಾತ್ರಿ ವೇಳೆಯಲ್ಲಿಯೂ ನಿರಂತರವಾಗಿ ಕರೆ ಮಾಡಿ ಹಣ ನೀಡುವಂತೆ ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಮಗಳ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ನೊಂದ ಮಹಿಳೆ ಚಿಕ್ಕಮಗಳೂರು ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ಸರ್ವೇ ಸ್ಕೆಚ್‌ಗೆ ₹20 ಸಾವಿರ ಲಂಚ ಬೇಡಿಕೆ – ಲಂಚ ಪಡೆಯುವಾಗ ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಸರ್ವೇ ಸ್ಕೆಚ್‌ಗೆ ಲಂಚ ಬೇಡಿಕೆ; ಲಂಚ ಸ್ವೀಕರಿಸುವಾಗ ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ
ಮೂಡಿಗೆರೆ, ಜೂನ್ 10: ಜಮೀನಿನ ಸರ್ವೇ ನಡೆಸಿ ಸ್ಕೆಚ್ ಮಾಡಿಕೊಡುವುದಕ್ಕಾಗಿ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ಸರ್ವೇಯರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಎಡಿಎಲ್ಆರ್ (ADLR) ಕಚೇರಿಯಲ್ಲಿ ನಡೆದಿದೆ.

 


ಸರ್ಕಾರಿ ಸರ್ವೇಯರ್ ಸುಮಾ ಅವರು ದೇವವೃಂದ ಗ್ರಾಮದ ನಿವಾಸಿ ಮಂಜುನಾಥ್ ಅವರ ಜಮೀನಿನ ಸರ್ವೇ ನಡೆಸಿ ಸ್ಕೆಚ್ ನೀಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಮಂಜುನಾಥ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಎಡಿಎಲ್ಆರ್ ಕಚೇರಿಯಲ್ಲೇ ಸುಮಾ ಅವರು ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಅವರನ್ನು ಬಲೆಗೆ ಬೀಳಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಕಾನೂನು ಕ್ರಮ ಮುಂದುವರಿದಿದೆ. ಕರ್ನಾಟಕದಲ್ಲಿ ಭೂ ಸರ್ವೇ ಮತ್ತು ಸ್ಕೆಚ್ ನೀಡುವ ಪ್ರಕ್ರಿಯೆಗಳು ಭೂ ದಾಖಲೆಗಳ ಆಡಳಿತದ ಪ್ರಮುಖ ಭಾಗವಾಗಿವೆ.

ಚಿಕ್ಕಮಗಳೂರಿನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು: ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಚಿಕ್ಕಮಗಳೂರು: ನಗರದ ಹಾಲೇನಹಳ್ಳಿ ಪ್ರದೇಶದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಸುಮಾ (55) ಎಂದು ಗುರುತಿಸಲಾಗಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಮೃತರ ಪತಿ ರಾಜೇಶ್ ಉದ್ಯಮಿಯಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದರೆ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಬಸವನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ಸೇರಿದಂತೆ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.