मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ಬಂದೂಕುಧಾರಿಗಳ ನುಸುಳುವಿಕೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!

 

​ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಮಲ್ಲಂದೂರು ಸಮೀಪವಿರುವ, ರಾಜ್ಯ ಸಚಿವ ಕೆ.ಜೆ. ಜಾರ್ಜ್ ಒಡೆತನದ ಪ್ರಸಿದ್ಧ ಏಳುನೂರುಖಾನ್ ಕಾಫಿ ತೋಟಕ್ಕೆ ಮಾರಕಾಸ್ತ್ರ ಹಾಗೂ ಬಂದೂಕುಧಾರಿಗಳ ತಂಡವೊಂದು ಅಕ್ರಮವಾಗಿ ನುಸುಳಿರುವುದು ತಡವಾಗಿ ಬೆಳಕಿಗೆ ಬಂದಿದೆ.

​ಮುತ್ತೋಡಿ ವನ್ಯಜೀವಿ ಅಭಯಾರಣ್ಯದ ತಪ್ಪಲಿಗೆ ಹೊಂದಿಕೊಂಡಂತಿರುವ ಈ ಕಾಫಿ ಎಸ್ಟೇಟ್‌ನಲ್ಲಿ ಜೂನ್ 17, 21 ಮತ್ತು 22ರ ಮಧ್ಯರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಓಡಾಡಿರುವುದು ಪತ್ತೆಯಾಗಿದೆ. ಹೆಗಲಿಗೆ ಬಂದೂಕು ಹಾಗೂ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೃಶ್ಯಗಳು ತೋಟದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.

​ಅಪರಿಚಿತರ ಈ ಅಕ್ರಮ ಪ್ರವೇಶ ಮತ್ತು ಚಲನವಲನಗಳು ತೋಟದ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಎಸ್ಟೇಟ್ ಮುತ್ತೋಡಿ ಅಭಯಾರಣ್ಯದ ಗಡಿಯಲ್ಲೇ ಇರುವುದರಿಂದ, ಈ ತಂಡವು ಕಾಡುಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲು ಬಂದಿರಬಹುದು ಅಥವಾ ಬೇರೆನಾದರೂ ಕಾನೂನುಬಾಹಿರ ಚಟುವಟಿಕೆಗೆ ಸಂಚು ರೂಪಿಸಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

​”ಮಧ್ಯರಾತ್ರಿ ಶಸ್ತ್ರಸಜ್ಜಿತರಾಗಿ ಬಂದಿಳಿದ ಅಪರಿಚಿತರಿಂದ ತೋಟದ ಭದ್ರತೆ ಹಾಗೂ ಕಾರ್ಮಿಕರ ರಕ್ಷಣೆಗೆ ಆತಂಕ ಎದುರಾಗಿದೆ

​ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ಎಸ್ಟೇಟ್‌ನ ಹಿರಿಯ ವ್ಯವಸ್ಥಾಪಕಿ ದಿವ್ಯಾ ಅವರು ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳ ಸಮೇತ ಮಲ್ಲಂದೂರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಲ್ಲಂದೂರು ಪೊಲೀಸರು, ಸಿಸಿಟಿವಿ ಫೂಟೇಜ್ ಆಧರಿಸಿ ಅಕ್ರಮ ನುಸುಳುಕೋರರ ಪತ್ತೆಗಾಗಿ ಜಾಲ ಬೀಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ವಿವಾಹಿತ ಮಹಿಳೆಗಾಗಿ ಇಬ್ಬರ ನಡುವೆ ಭೀಕರ ಫೈಟಿಂಗ್; ಲಾಂಗ್ ಬೀಸಿ ಯುವಕನ ಹಸ್ತ ಕಟ್!

 

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ವಿವಾಹಿತ ಮಹಿಳೆಯೊಬ್ಬಳಿಗಾಗಿ ಇಬ್ಬರು ಪುರುಷರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಒಬ್ಬನ ಕೈ ಹಸ್ತ ಸಂಪೂರ್ಣವಾಗಿ ಕತ್ತರಿಸಿಹೋಗಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ:

​ಗಂಡನಿಂದ ದೂರವಿದ್ದ ನಾಗರತ್ನ ಎಂಬ ಮಹಿಳೆಗಾಗಿ ಶೇಷಗಿರಿ (40) ಹಾಗೂ ಅರುಣ್ (35) ಎಂಬ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಅಡಿಗೆಬೈಲು ಗ್ರಾಮದಲ್ಲಿ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದು, ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕೈ ಅಡ್ಡಕೊಟ್ಟಿದ್ದಕ್ಕೆ ಹಸ್ತವೇ ತುಂಡು!

​ಗಲಾಟೆ ತಾರಕಕ್ಕೇರಿದಾಗ ಆಕ್ರೋಶಗೊಂಡ ಶೇಷಗಿರಿ ಎಂಬಾತ ಅರುಣ್ ಮೇಲೆ ಮಾರಕಾಸ್ತ್ರದಿಂದ (ಲಾಂಗ್) ಏಕಾಏಕಿ ದಾಳಿ ಮಾಡಿದ್ದಾನೆ. ಈ ವೇಳೆ ತನ್ನನ್ನು ರಕ್ಷಿಸಿಕೊಳ್ಳಲು ಅರುಣ್ ಕೈ ಅಡ್ಡ ಕೊಟ್ಟಿದ್ದಾನೆ. ಬೀಸಿದ ಲಾಂಗ್ ಏಟಿನ ತೀವ್ರತೆಗೆ ಅರುಣ್ ಅವರ ಕೈ ಹಸ್ತ ಸಂಪೂರ್ಣವಾಗಿ ತುಂಡಾಗಿ ನೆಲಕ್ಕೆ ಬಿದ್ದಿದೆ.

ಮಂಗಳೂರು ಆಸ್ಪತ್ರೆಗೆ ರವಾನೆ:

​ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅರುಣ್‌ನನ್ನು ತಕ್ಷಣವೇ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

​ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಸದ್ಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾತ್ರಿ ಗಲಾಟೆ, ಬೆಳಗ್ಗೆ ಹೆದರಿ ಊರಿನತ್ತ ಹೆಜ್ಜೆ ಹಾಕಿದ ವಾಲ್ಮೀಕಿ ವಸತಿ ಶಾಲೆಯ ವಿದ್ಯಾರ್ಥಿಗಳು!

 

ಚಿಕ್ಕಮಗಳೂರು: ತಾಲೂಕಿನ ತುಡುಕೂರು ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮಿಕಿ ವಸತಿ ಶಾಲೆಯಿಂದ ನಾಲ್ವರು ಪುಟ್ಟ ಮಕ್ಕಳು ಯಾರಿಗೂ ತಿಳಿಸದಂತೆ ಹೊರಬಂದಿರುವ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ವಸತಿ ಶಾಲೆಯಲ್ಲಿ ಮಕ್ಕಳ ನಡುವೆ ನಡೆದ ಗಲಾಟೆಯಿಂದ ತೀವ್ರ ಭಯಗೊಂಡಿದ್ದ ಈ ನಾಲ್ವರು ವಿದ್ಯಾರ್ಥಿಗಳು, ಬೆಳ್ಳಂಬೆಳಗ್ಗೆ ತಮ್ಮ ಊರುಗಳಿಗೆ ಮರಳಲು ಬ್ಯಾಗ್ ಸಮೇತ ಹಾಸ್ಟೆಲ್ ಬಿಟ್ಟು ಹೊರಟಿದ್ದಾರೆ.
ಮೂಲತಃ ಉತ್ತರ ಕರ್ನಾಟಕದವರಾದ ಈ ಪುಟ್ಟ ಮಕ್ಕಳು ಹಾಸ್ಟೆಲ್‌ನಿಂದ ಯಾರಿಗೂ ತಿಳಿಯದಂತೆ ಹೊರಬಂದು, ಸುಮಾರು 2 ಕಿಲೋಮೀಟರ್‌ನಷ್ಟು ದೂರ ಚಿಕ್ಕಮಗಳೂರು ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂಟಿಯಾಗಿ ಹೋಗುತ್ತಿದ್ದ ಮಕ್ಕಳನ್ನು ಕಂಡು ಅನುಮಾನಗೊಂಡ ಸ್ಥಳೀಯರು ಅವರನ್ನು ತಡೆದು ವಿಚಾರಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಜಾಗರೂಕರಾದ ಸಾರ್ವಜನಿಕರು ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಹಾಸ್ಟೆಲ್‌ಗೆ ಕರೆತಂದು ಒಪ್ಪಿಸಿದ್ದಾರೆ.
ಆದರೆ, ಪುಟ್ಟ ಮಕ್ಕಳು ಅಷ್ಟು ದೂರ ಬ್ಯಾಗ್ ಹೆಗಲಿಗೇರಿಸಿಕೊಂಡು ನಡೆದು ಬಂದಿದ್ದರೂ ವಸತಿ ಶಾಲೆಯ ಅಧಿಕಾರಿಗಳು, ವಾರ್ಡನ್ ಅಥವಾ ಅಲ್ಲಿನ ಭದ್ರತಾ ಸಿಬ್ಬಂದಿ ಗಮನಿಸದೇ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಈ ವಸತಿ ಶಾಲೆಯಲ್ಲಿನ ಭದ್ರತಾ ಲೋಪ ಹಾಗೂ ಅವ್ಯವಸ್ಥೆಯನ್ನು ಈ ಘಟನೆ ಎತ್ತಿ ತೋರಿಸಿದೆ. ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ಮಕ್ಕಳನ್ನು ರಕ್ಷಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದು ವೇಳೆ ಮಕ್ಕಳು ಸಿಗದೇ ಹೋಗಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಮತ್ತು ಅದಕ್ಕೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಲಾಂಗ್ ಹಿಡಿದು ರೌಡಿಸಂ: ಯೂತ್ ಕೈ ಮುಖಂಡನ ವಿರುದ್ಧ ಪಕ್ಷದ ಕಠಿಣ ಕ್ರಮ

 

 

ಚಿಕ್ಕಮಗಳೂರು: ಸಾರ್ವಜನಿಕ ರಸ್ತೆಯಲ್ಲೇ ಲಾಂಗ್ ಹಿಡಿದು ಪುಂಡಾಟಿಕೆ ಮೆರೆದಿದ್ದ ಆಲ್ದೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ತೇಜಸ್ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಂಡಿದ್ದು, ಪಕ್ಷದಿಂದ ಉಚ್ಚಾಟನೆಗೆ ಶಿಫಾರಸು ಮಾಡಲಾಗಿದೆ. ಐದಳ್ಳಿ ಗ್ರಾಮದಲ್ಲಿ ನಡೆದ ಹಬ್ಬದ ವೇಳೆ ಕ್ಷುಲ್ಲಕ ವಿಚಾರಕ್ಕೆ ದಯಾನಂದ್ ಎಂಬುವರನ್ನು ಅಡ್ಡಗಟ್ಟಿ, ಕಾರಿನಿಂದ ಲಾಂಗ್ ಹೊರತೆಗೆದು ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಆರೋಪ ತೇಜಸ್ ವಿರುದ್ಧ ಕೇಳಿಬಂದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ತೇಜಸ್‌ನನ್ನು ಬಂಧಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. ಆದರೆ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸಿ ಪಕ್ಷದ ಘನತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವ ಕಠಿಣ ನಿಲುವು ತಾಳಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಅವರ ಸೂಚನೆಯ ಮೇರೆಗೆ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕೃತ ಶಿಫಾರಸು ಪತ್ರ ಕಳುಹಿಸಿದ್ದು, ತೇಜಸ್ ಅವರನ್ನು ಯುವ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಬೆಳವಣಿಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅನಿಲ ದುರಂತ: ಸಿಲಿಂಡರ್ ಸ್ಫೋಟಕ್ಕೆ ವ್ಯಕ್ತಿ ಗಂಭೀರ ಗಾಯ

 

 

ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ಕ್ರಾಸ್ ಸಮೀಪ ಅನಿಲ ಸೋರಿಕೆಯಿಂದ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಸ್ಫೋಟದ ಭಾರೀ ಶಬ್ದಕ್ಕೆ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದು, ಮನೆಯೊಳಗಿದ್ದ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಬಟ್ಟೆಗಳು ಸೇರಿದಂತೆ ಅನೇಕ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿವೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಈ ಸಂಬಂಧ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಫೋಟಕ್ಕೆ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.

ಅರಣ್ಯಾಧಿಕಾರಿಯ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾ ಪೊಲೀಸರ ಹಠಾತ್ ದಾಳಿ

 

 

ಚಿಕ್ಕಮಗಳೂರು: ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ACF) ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಅವರಿಗೆ ಸೇರಿದ ನಿವಾಸ ಹಾಗೂ ಇತರ ಪ್ರಮುಖ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು ಮುಂಜಾನೆ ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡುತ್ತಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಮಿತಿಮೀರಿದ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಹಠಾತ್ ಕಾರ್ಯಾಚರಣೆ ನಡೆಸಲಾಗಿದೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಅಧಿಕಾರಿ ಮೋಹನ್ ಅವರ ಸ್ವಗೃಹ ಹಾಗೂ ಕಡೂರಿನಲ್ಲಿರುವ ಅವರ ಸಹೋದರಿಯ ಮನೆ ಮೇಲೆಯೂ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕೈಗೊಂಡಿವೆ. ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದ ಸಿಬ್ಬಂದಿ ಈ ಬೃಹತ್ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಪ್ರಮುಖ ದಾಖಲೆ ಪತ್ರಗಳು ಮತ್ತು ಆಸ್ತಿ ವಿವರಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಒಂದೇ ದಿನದ ಹಸುಗೂಸಿನ ಶವ ಪೊದೆಯಲ್ಲಿ ಪತ್ತೆ

ಚಿಕ್ಕಮಗಳೂರು: ನಗರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ನಗರದ ಸರ್ಕಾರಿ ಬಸ್ ಡಿಪೋ ಸಮೀಪದ ನಿರ್ಜನ ಪ್ರದೇಶದ ಪೊದೆಯೊಳಗೆ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟಿದ್ದ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ರಸ್ತೆ ಬದಿಯ ಪೊದೆಯಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲವನ್ನು ಗಮನಿಸಿದ ಸ್ಥಳೀಯರು ಅದನ್ನು ಬಿಚ್ಚಿ ನೋಡಿದಾಗ ಕೇವಲ ಒಂದು ದಿನದ ಮಗುವಿನ ಮೃತದೇಹ ಇರುವುದು ಕಂಡುಬಂದಿದೆ. ಮಗು ಸಾವನ್ನಪ್ಪಿದ ಬಳಿಕ ಅದಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಬೇಕಾಗಿದ್ದ ಹೆತ್ತವರೇ, ಚೀಲದಲ್ಲಿ ತುಂಬಿ ಕಸದಂತೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯಕ್ಕೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಆಸ್ಪತ್ರೆಯಲ್ಲೇ ಜನಿಸಿರುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಮಗುವಿನ ಹೊಕ್ಕಳು ಬಳ್ಳಿಗೆ ಹಾಕಲಾಗುವ ವೈದ್ಯಕೀಯ ಪ್ಲಾಸ್ಟಿಕ್ ಕ್ಲಿಪ್ ಹಾಗೆಯೇ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇದೇ ಕ್ಲಿಪ್ ಈಗ ಪೊಲೀಸರ ಕೈಗೆ ಸಿಕ್ಕಿರುವ ಬಹುದೊಡ್ಡ ಸುಳಿವಾಗಿದ್ದು, ಇದರ ಆಧಾರದ ಮೇಲೆಯೇ ತನಿಖೆ ಆರಂಭಗೊಂಡಿದೆ. ​ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ

ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ರೈಲು ಸಂಚಾರ: ವೀಕೆಂಡ್ ಪ್ರಯಾಣಿಕರಿಗೆ ನೈಋತ್ಯ ರೈಲ್ವೆಯಿಂದ ಬಂಪರ್ ಕೊಡುಗೆ!

 

ವೀಕೆಂಡ್‌ನಲ್ಲಿ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಪ್ರಯಾಣಿಸಲು ಯೋಜಿಸುತ್ತಿರುವ ಸಾರ್ವಜನಿಕರಿಗೆ ನೈಋತ್ಯ ರೈಲ್ವೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಯಾಣಿಕರ ಅತಿಯಾದ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ವಿಶೇಷ ರೈಲುಗಳ ಕಾರ್ಯಾಚರಣೆಯು ಜೂನ್ 20 ಮತ್ತು ಜೂನ್ 21 ರ ಶನಿವಾರ ಹಾಗೂ ಭಾನುವಾರಗಳಂದು ನಡೆಯಲಿದ್ದು, ಎರಡೂ ದಿಕ್ಕುಗಳಲ್ಲಿ ತಲಾ ಎರಡು ಟ್ರಿಪ್‌ಗಳ ಸೇವೆಯನ್ನು ಒದಗಿಸಲಿವೆ. ರೈಲು ಸಂಖ್ಯೆ 07341 ಹುಬ್ಬಳ್ಳಿಯಿಂದ ಮುಂಜಾನೆ 5:00 ಗಂಟೆಗೆ ಸಂಚಾರ ಆರಂಭಿಸಿ, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರನ್ನು ತಲುಪಲಿದೆ. ಇನ್ನು ಮರುಪ್ರಯಾಣದ ರೈಲು ಸಂಖ್ಯೆ 07342 ಚಿಕ್ಕಮಗಳೂರಿನಿಂದ ಸಂಜೆ 17:30 ಕ್ಕೆ ಹೊರಟು, ರಾತ್ರಿ 23:20 ಕ್ಕೆ ಹುಬ್ಬಳ್ಳಿಗೆ ಬಂದು ತಲುಪಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳು ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು ಮತ್ತು ಬೀರೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದುಕೊಳ್ಳಲಿವೆ. ಸಂಪೂರ್ಣ ರೈಲು ಒಟ್ಟು 10 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ಒಂದು ಸ್ಲೀಪರ್ ಕ್ಲಾಸ್, ಏಳು ಸಾಮಾನ್ಯ ದರ್ಜೆಯ ಬೋಗಿಗಳು ಹಾಗೂ ಎರಡು ಎಸ್‌ಎಲ್‌ಆರ್ ಬೋಗಿಗಳು ಒಳಗೊಂಡಿರುತ್ತವೆ. ವೀಕೆಂಡ್ ರಜಾ ದಿನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಈ ವಿಶೇಷ ರೈಲು ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಳ್ಳಯ್ಯನಗಿರಿ ಪ್ರವಾಸಿಗರೇ ಎಚ್ಚರ..! ಉರುಳಿಗೆ ಸಿಲುಕಿ ಗಾಯಗೊಂಡ ಹುಲಿ ಅರಣ್ಯದಲ್ಲಿ ಸಂಚಾರ

 

ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿ ಗಾಯಗೊಂಡಿರುವ ಹುಲಿಯೊಂದು ಕಳೆದ ನಾಲ್ಕೈದು ದಿನಗಳಿಂದ ಅರಣ್ಯ ಪ್ರದೇಶ ಹಾಗೂ ತೋಟಗಳ ಸುತ್ತಮುತ್ತ ಸಂಚರಿಸುತ್ತಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮುಳ್ಳಯ್ಯನಗಿರಿ ತಪ್ಪಲಿನ ಏಳುನೂರ್ ಖಾನ್ ಎಸ್ಟೇಟ್ ಸಮೀಪ ಹುಲಿ ಉರುಳಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಹುಲಿಯ ಸೊಂಟ ಭಾಗಕ್ಕೆ ಉರುಳಿ ಸಿಲುಕಿದ್ದು, ಅದೇ ಉರುಳನ್ನು ನೇತಾಡಿಸಿಕೊಂಡು ನೋವಿನಲ್ಲೇ ಸಂಚರಿಸುತ್ತಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.

ಗಾಯಗೊಂಡಿದ್ದರೂ ಹುಲಿ ಆಹಾರಕ್ಕಾಗಿ ಬೇಟೆಯಾಡುತ್ತಿದ್ದು, ಜಿಂಕೆ ಹಾಗೂ ಕಡವೆಯನ್ನು ಕೊಂದಿರುವ ಕುರುಹುಗಳು ಪತ್ತೆಯಾಗಿವೆ. ಇದರಿಂದ ಹುಲಿ ಇನ್ನೂ ಚುರುಕಾಗಿ ಸಂಚರಿಸುತ್ತಿರುವುದು ಅರಣ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ಕಳೆದ ಮೂರುನಾಲ್ಕು ದಿನಗಳಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದು, ಹಲವು ಕಡೆ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿ ನಿಗಾವಹಿಸಿದ್ದಾರೆ. ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟು ಸೂಕ್ತ ಸಮಯದಲ್ಲಿ ಸೆರೆ ಕಾರ್ಯಾಚರಣೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆ.

ಇನ್ನೊಂದೆಡೆ, ಏಳುನೂರ್ ಖಾನ್, ಪಂಡರವಳ್ಳಿ ಹಾಗೂ ಕೊಳಗಾಮೆ ಗ್ರಾಮಗಳ ಜನರು ಭಯಭೀತರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ತೋಟದ ಕಾರ್ಮಿಕರು ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಅನಗತ್ಯವಾಗಿ ಅರಣ್ಯ ಹಾಗೂ ತೋಟ ಪ್ರದೇಶಗಳಲ್ಲಿ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ.

 

25 ಮಕ್ಕಳ ಬಾಳಲ್ಲಿ ಬೆಳಕಾದ ಕನ್ನಡ ಸಾಹಿತ್ಯ ಪರಿಷತ್; ಉಚಿತ ಹೃದಯ ಶಸ್ತ್ರಚಿಕಿತ್ಸೆ!

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಂದರೆ ಕೇವಲ ಸಾಹಿತ್ಯ, ಕವಿಗೋಷ್ಠಿ, ಪುಸ್ತಕ ಬಿಡುಗಡೆಗಷ್ಟೇ ಸೀಮಿತವಲ್ಲ ಎಂಬುದನ್ನು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಘಟಕವು ಸಾಬೀತುಪಡಿಸಿದೆ. ಅಕ್ಷರ ಸೇವೆಯ ಜೊತೆಗೆ ಅಪರೂಪದ ಜನಸೇವೆಯ ಮೂಲಕ ಬರೋಬ್ಬರಿ 25 ಕಡುಬಡ ಮಕ್ಕಳ ಬಾಳಿಗೆ ಬೆಳಕಾಗುವ ಮೂಲಕ ಕಸಾಪ ಮಹತ್ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದೆ.

​ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 25 ಮಕ್ಕಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲಾ ಕಸಾಪ ಘಟಕವು ಮಾನವೀಯತೆ ಮೆರೆದಿದೆ.

​ಶಿಬಿರದಲ್ಲಿ ಪತ್ತೆಯಾಗಿದ್ದ ಮಕ್ಕಳು:

​ಕಳೆದ ಮೇ 16ರಂದು ಚಿಕ್ಕಮಗಳೂರು ಜಿಲ್ಲಾ ಕಸಾಪ ಘಟಕದ ವತಿಯಿಂದ ಬೃಹತ್ ಹೃದಯ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಖ್ಯಾತ ಮಕ್ಕಳ ಹಾಗೂ ಹೃದ್ರೋಗ ತಜ್ಞರಾದ ಡಾ. ಗೋವಿಂದರಾಜ್ ನೇತೃತ್ವದ ವೈದ್ಯರ ತಂಡವು ಅಂದು ಶಿಬಿರದಲ್ಲಿ ನೂರಾರು ಮಕ್ಕಳ ತಪಾಸಣೆ ನಡೆಸಿತ್ತು. ಈ ವೇಳೆ 9 ತಿಂಗಳ ಹಸುಗೂಸಿನಿಂದ ಹಿಡಿದು 14 ವರ್ಷದೊಳಗಿನ 25 ಮಕ್ಕಳಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದು ಪತ್ತೆಯಾಗಿತ್ತು.

​ವೈದೇಹಿ ಆಸ್ಪತ್ರೆ ಸಹಯೋಗ – ಎಲ್ಲವೂ ಉಚಿತ!

​ಬಡ ಪೋಷಕರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಈ ಚಿಕಿತ್ಸೆ ಗಗನಕುಸುಮವಾಗಿತ್ತು. ಇದನ್ನು ಅರಿತ ಕಸಾಪ ಘಟಕವು ತಕ್ಷಣವೇ ಬೆಂಗಳೂರಿನ ಪ್ರಸಿದ್ಧ ವೈದೇಹಿ ಆಸ್ಪತ್ರೆಯ ಸಹಯೋಗ ಮತ್ತು ಸಹಕಾರದೊಂದಿಗೆ ಈ ಎಲ್ಲಾ 25 ಮಕ್ಕಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಕೊಡಿಸಲು ಮುಂದಾಗಿದೆ.

​ವಿಶೇಷತೆ ಏನು?: ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ, ಮಕ್ಕಳ ಆಪರೇಷನ್ ವೆಚ್ಚ, ಪೋಷಕರಿಗೆ ಊಟ, ತಿಂಡಿ ಹಾಗೂ ವಸತಿ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನೂ ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗಿದೆ.

​ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಬೀಳ್ಕೊಡುಗೆ:

​ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದ 25 ಮಕ್ಕಳು ಹಾಗೂ ಅವರ ಪೋಷಕರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲು ಚಿಕ್ಕಮಗಳೂರಿನಿಂದಲೇ ಕಸಾಪ ಘಟಕವು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ಪ್ರಮುಖರು ಶಸ್ತ್ರಚಿಕಿತ್ಸೆಗೆ ತೆರಳಿದ ಮಕ್ಕಳಿಗೆ ಧೈರ್ಯ ತುಂಬಿ, ಶುಭ ಹಾರೈಸಿ ಬಸ್ ಮೂಲಕ ಬೆಂಗಳೂರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.

​ಸಾಹಿತ್ಯಿಕ ಚಟುವಟಿಕೆಗಳ ನಡುವೆ, ಬಡ ಕುಟುಂಬಗಳ ಕಣ್ಣೀರು ಒರೆಸಿ, ಮಕ್ಕಳ ಜೀವ ಉಳಿಸುವ ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಘಟಕದ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.