ಕಾಫಿನಾಡಲ್ಲಿ ಕಾಡಾನೆ ಅಟ್ಟಹಾಸ: ಮನೆಗೆ ಮರಳುತ್ತಿದ್ದ ಕಾರ್ಮಿಕ ಆನೆ ದಾಳಿಗೆ ಬಲಿ

ಕಾಫಿನಾಡಿನಲ್ಲಿ ಕಾಡಾನೆ ಅಟ್ಟಹಾಸ ಮುಂದುವರಿದಿದ್ದು, ಆನೆ ದಾಳಿಗೆ ಸಿಲುಕಿ ಕೂಲಿ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿರುವಳ್ಳಿ ಮೂಲದ ಯಲ್ಲಪ್ಪ (45) ಎಂಬುವವರೇ ಮೃತಪಟ್ಟ ದುರ್ದೈವಿ.

ಮೃತ ಯಲ್ಲಪ್ಪ ಅವರು ಈ ಭಾಗದ ತೋಟಗಳಲ್ಲಿ ಕೂಲಿ ಕೆಲಸ ಹಾಗೂ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನೆಯ ದಿನ ಕೆಲಸ ಮುಗಿಸಿ ನಾಗೇಶ್ ಗೌಡರ ತೋಟದ ಹಾದಿಯ ಮೂಲಕ ಶ್ರೀಧರ್ ಗೌಡ ಎಂಬುವವರ ತೋಟದ ಲೈನ್ ಮನೆಗೆ ತೆರಳುತ್ತಿದ್ದರು. ಈ ವೇಳೆ ದಿಢೀರನೆ ಎದುರಾದ ಕಾಡಾನೆ ಯಲ್ಲಪ್ಪ ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಫಿ ತೋಟಗಳ ನಡುವೆ ಆನೆಗಳ ಹಾವಳಿ ಹೆಚ್ಚುತ್ತಿರುವುದು ಕಾರ್ಮಿಕರಲ್ಲಿ ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *