ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿಯಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ಘಟಕವೊಂದರ ಭೀಕರ ಎಡವಟ್ಟಿನಿಂದಾಗಿ ಇಬ್ಬರು ರೈತರು ತಮ್ಮ ಕಾಲುಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹರಿಹರದಹಳ್ಳಿಯ ವಿದ್ಯಾ ಕಾಫಿ ಕ್ಯೂರಿಂಗ್ ಘಟಕವು ತನ್ನ ಕಸದ ಬೂದಿ ಮತ್ತು ರಾಸಾಯನಿಕ ಮಿಶ್ರಿತ ನೀರನ್ನು ರಾತ್ರೋರಾತ್ರಿ ರೈತರ ಹೊಲಗಳಿಗೆ ಸುರಿಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕಲ್ಲಿದ್ದಲಿನಂತೆ ಹೊತ್ತಿ ಉರಿಯುವ ಬೂದಿಯ ಮೇಲೆ ಅರಿಯದೇ ಕಾಲಿಟ್ಟ ದೇವರಾಜ್ ಮತ್ತು ಈರೇಗೌಡ ಎಂಬ ರೈತರ ಕಾಲುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಪ್ರಸ್ತುತ ಇಬ್ಬರೂ ರೈತರು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾಲಿನ ಮೇಲ್ಭಾಗದ ಚರ್ಮ ಸುಟ್ಟು ಕರಕಲಾಗಿರುವುದರಿಂದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ಘಟಕವು ನಿಯಮಗಳನ್ನು ಗಾಳಿಗೆ ತೂರಿ ಜನವಸತಿ ಮತ್ತು ಕೃಷಿ ಭೂಮಿಯ ಬಳಿ ಅಪಾಯಕಾರಿ ತ್ಯಾಜ್ಯವನ್ನು ಸುರಿಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಬೆಂಕಿಯಂತೆ ಉರಿಯುವ ಈ ಬೂದಿ ಮೇಲೆ ಕಾಲಿಟ್ಟರೆ ಕ್ಷಣಾರ್ಧದಲ್ಲಿ ಚರ್ಮ ಸುಟ್ಟು ಹೋಗುವಷ್ಟು ತೀವ್ರತೆ ಹೊಂದಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕ್ಯೂರಿಂಗ್ ಘಟಕದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Leave a Reply