ಚಿಕ್ಕಮಗಳೂರು: ಕಾಫಿನಾಡಿನ ಕೀರ್ತಿ ಪತಾಕೆ ಈಗ ರಾಷ್ಟ್ರ ರಾಜಧಾನಿಯಲ್ಲಿ ರಾರಾಜಿಸುತ್ತಿದೆ. ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ನಿರ್ವಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ನಗರದ ಹೆಸರಾಂತ ‘ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್’ ಸಂಸ್ಥೆಯು 2026ರ ಪ್ರತಿಷ್ಠಿತ ‘ವಾಟರ್ ಟ್ರಾನ್ಸ್ರ್ವಲಿಟಿ ಗ್ಲೋಬಲ್’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದೆ.
ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಸಂಸ್ಥೆಯ ನಿರ್ದೇಶಕರಾದ ವರುಣ್ ರಿನಾಲ್ಗೊ ಬ್ಯಾಪ್ಟಿಸ್ಟ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸುಸ್ಥಿರ ನೀರಿನ ಪರಿಹಾರಗಳಲ್ಲಿ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು, ವಸತಿ, ವಾಣಿಜ್ಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಕೇವಲ ಮೇಲ್ಛಾವಣಿಯ ನೀರನ್ನು ಸಂಗ್ರಹಿಸುವುದು ಮಾತ್ರವಲ್ಲದೆ, ವೈಜ್ಞಾನಿಕ ಹರಿವಿನ ಮೂಲಕ ಅಂತರ್ಜಲ ಮರುಪೂರಣ ಮಾಡುವಲ್ಲಿ ಸಂಸ್ಥೆ ತೋರಿರುವ ಬದ್ಧತೆಯನ್ನು ಕೇಂದ್ರ ಸರ್ಕಾರ ಮತ್ತು ಜಾಗತಿಕ ವೇದಿಕೆ ಮುಕ್ತಕಂಠದಿಂದ ಶ್ಲಾಘಿಸಿದೆ.
ನೀರಿನ ಕೊರತೆಯ ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ಹಾಗೂ ಸುಲಭವಾಗಿ ವಿಸ್ತರಿಸಬಹುದಾದ ತಂತ್ರಜ್ಞಾನವನ್ನು ಪರಿಚಯಿಸಿರುವುದು ಈ ಸಂಸ್ಥೆಯ ವಿಶೇಷತೆಯಾಗಿದೆ. ದೀರ್ಘಕಾಲಿನ ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಸಂಸ್ಥೆ ರೂಪಿಸಿರುವ ವಿನ್ಯಾಸಗಳು ಇಂದು ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗಿವೆ. ಈ ಸುಸಂದರ್ಭದಲ್ಲಿ ಗ್ಲೋಬಲ್ ಅಲೈಯನ್ಸ್ ಫಾರ್ ಎ ಸಸ್ಟೈನೇಬಲ್ ಪ್ಲಾನೆಟ್ ಅಧ್ಯಕ್ಷ ಡಾ. ಸತ್ಯತ್ರಿಪಾಠಿ ಹಾಗೂ ಇಂಡಿಯನ್ ವಾಟರ್ ಫೌಂಡೇಷನ್ನ ಡಾ. ಅರವಿಂದ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಚಿಕ್ಕಮಗಳೂರಿನ ಈ ಸಾಧಕ ಸಂಸ್ಥೆಯ ಕಾರ್ಯವೈಖರಿಯನ್ನು ಅಭಿನಂದಿಸಿದರು. ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಫಾರ್ಮ್ ಲ್ಯಾಂಡ್ ಸಂಸ್ಥೆಯ ಈ ಸಾಧನೆ ಇತರರಿಗೂ ಮಾದರಿಯಾಗಿದೆ.











Leave a Reply