ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದ ಏರುಪೇರು ಮುಂದುವರಿದಿದ್ದು, ಇಂದು ಸಂಜೆ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಗಲಿನಲ್ಲಿ ಸುಡುತ್ತಿರುವ ಭಾರೀ ಬಿಸಿಲಿಗೆ ತತ್ತರಿಸಿದ್ದ ಜನತೆಗೆ ಸಂಜೆಯ ಮಳೆ ತಂಪು ನೀಡಿದರೂ, ಗಾಳಿ-ಮಳೆಯ ರೌದ್ರಾವತಾರ ಮಲೆನಾಡಿಗರನ್ನು ಕಂಗಾಲಾಗುವಂತೆ ಮಾಡಿದೆ.
ಆಲಿಕಲ್ಲು ಮಳೆಯ ಆರ್ಭಟ:
ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಮತ್ತು ಮತ್ತಿಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಸಿಡಿಲು ಹಾಗೂ ರಣಭೀಕರ ಗಾಳಿಯೊಂದಿಗೆ ಮಳೆ ಸುರಿದಿದೆ. ವಿಶೇಷವಾಗಿ ಭಾರೀ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಹಠಾತ್ ಮಳೆಯಿಂದಾಗಿ ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು.
ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿರುವುದು ಕಾಫಿ ಮತ್ತು ಅಡಿಕೆ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಬೇಸಿಗೆಯ ಬಿಸಿಲಿಗೆ ತತ್ತರಿಸಿ ಗಿಡಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರರಿಗೆ ಈ ಮಳೆ ವರದಾನವಾಗಿ ಪರಿಣಮಿಸಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.














Leave a Reply