ಕಾಫಿನಾಡಿನಲ್ಲಿ ವರುಣನ ಅಬ್ಬರ: ಆಲಿಕಲ್ಲು ಮಳೆಗೆ ಬೆಳೆಗಾರರು ಕಂಗಾಲು, ಜನಜೀವನ ಅಸ್ತವ್ಯಸ್ತ*

Spread the love

 

 

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಸುಡುವ ಬಿಸಿಲಿಗೆ ತತ್ತರಿಸಿದ್ದ ಮಲೆನಾಡಿಗರಿಗೆ ವರುಣ ತಂಪು ನೀಡಿದ್ದರೂ, ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿ ರೈತರ ಬದುಕನ್ನೇ ಕಿತ್ತುಕೊಂಡಿದೆ. ಆಲ್ದೂರು ಸುತ್ತಮುತ್ತಲಿನ ಅಡ್ಡಮಕ್ಕಿ ಭಾಗದಲ್ಲಿ ಬಿರುಗಾಳಿಯ ಆರ್ಭಟಕ್ಕೆ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕಚ್ಚಿವೆ. ಇದರಿಂದ ಮೆಸ್ಕಾಂ ಇಲಾಖೆಗೆ ಭಾರೀ ನಷ್ಟ ಉಂಟಾಗಿದ್ದು, ಹತ್ತಾರು ಗ್ರಾಮಗಳು ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗಿವೆ.

ಮಳೆ ತಂದ ಈ ಅನಾಹುತ ಬೆಳೆಗಾರರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಆಲಿಕಲ್ಲು ಹೊಡೆತಕ್ಕೆ ಕಾಫಿ ಮತ್ತು ಅಡಿಕೆ ಬೆಳೆಗಳು ಅಕ್ಷರಶಃ ಧರೆಗುರುಳುವ ಭೀತಿ ಎದುರಾಗಿದೆ, ವರ್ಷಪೂರ್ತಿ ಶ್ರಮಹಾಕಿದ್ದ ಬೆಳೆಗಾರರು ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮತ್ತೊಂದೆಡೆ ಮಳೆಯ ಆರ್ಭಟಕ್ಕೆ ಶಂಕರ್ ಫಾಲ್ಸ್ ಸಮೀಪ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದ್ದರಿಂದ ವಾಹನ ಸವಾರರು ತೀವ್ರ ಪರದಾಡಿದರು. ಕೊನೆಗೆ ಅಧಿಕಾರಿಗಳ ನಿರೀಕ್ಷೆ ಮಾಡದ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಮರ ತೆರವುಗೊಳಿಸಿ ಸಂಚಾರಕ್ಕೆ ಹಾದಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದರು.

ಈ ಆತಂಕದ ನಡುವೆಯೂ ಕೆಲವು ಕುತೂಹಲಕಾರಿ ದೃಶ್ಯಗಳು ಕಂಡುಬಂದವು. ಸುರಿಯುವ ಮಳೆಯಲ್ಲಿ ಹರ್ಷಗೊಂಡ ಆಲ್ದೂರಿನ ವ್ಯಕ್ತಿಯೊಬ್ಬರು ನಡುರಸ್ತೆಯಲ್ಲಿ ನೃತ್ಯ ಮಾಡಿದರೆ, ಮಹಿಳೆಯೊಬ್ಬರು ಮುತ್ತಿನಂತಹ ಆಲಿಕಲ್ಲುಗಳನ್ನು ಆರಿಸಿ ಸಂಭ್ರಮಿಸಿದರು. ಒಂದೆಡೆ ಮಳೆಯ ಸಂಭ್ರಮ, ಇನ್ನೊಂದೆಡೆ ಬೆಳೆ ಕಳೆದುಕೊಳ್ಳುವ ಆತಂಕ, ಹೀಗೆ ಚಿಕ್ಕಮಗಳೂರಿನಲ್ಲಿ ಅಕಾಲಿಕ ಮಳೆ ಮಿಶ್ರ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *