ಮೂಡಿಗೆರೆ: ಅಪರಿಚಿತ ವೃದ್ಧರೊಬ್ಬರ ಶವವೊಂದು ಮೂಡಿಗೆರೆ ತಾಲೂಕಿನ ದೇವನಗುಲ್ ಅರಣ್ಯ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಬಳಿ ಮಾನಸಿಕ ಅಸ್ವಸ್ಥರಂತೆ ತಿರುಗಾಡುತ್ತಿದ್ದ ಈ ವೃದ್ಧ ಊರಿನ ಹೆಸರು ಕೇಳಿದರೆ “ಮಂಡ್ಯ” ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬೇಲಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಗೆ ಕಾಡಿನೊಳಗೆ ಶವ ಕಂಡುಬಂದಿದ್ದು, ತಕ್ಷಣವೇ ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬಣಕಲ್ ಪಿಎಸ್ಐ ದಿಲೀಪ್ ಕುಮಾರ್ ಮೃತದೇಹವನ್ನು ಪರಿಶೀಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ದೇಹದ ಮೇಲೆ ಯಾವುದೇ ಗಾಯದ ಕಲೆಗಳಾಗಲಿ ಅಥವಾ ಅನುಮಾನಾಸ್ಪದ ಗುರುತುಗಳಾಗಲಿ ಕಂಡುಬಂದಿಲ್ಲ. ತದನಂತರ ಸಮಾಜಸೇವಕ ಆರಿಫ್ ಅವರ ಆಂಬುಲೆನ್ಸ್ ಮೂಲಕ ಶವವನ್ನು ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಇದೇ ವೇಳೆ ಅನಾಥ ಶವವನ್ನು ಸ್ವತಃ ಹೆಗಲ ಮೇಲೆ ಹೊತ್ತು ಆಂಬುಲೆನ್ಸ್‌ಗೆ ಸಾಗಿಸುವ ಮೂಲಕ ಪಿಎಸ್ಐ ದಿಲೀಪ್ ಕುಮಾರ್ ತಮ್ಮ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದು ಶ್ಲಾಘನೆಗೆ ಪಾತ್ರರಾಗಿದ್ದಾರೆ.













Leave a Reply