ಅಜ್ಜಂಪುರ: ರಸ್ತೆಯಲ್ಲಿ ದಿಢೀರನೆ ಪ್ರತ್ಯಕ್ಷವಾದ ನಾಗರಹಾವೊಂದನ್ನು ಕಂಡು ಬೈಕ್ ಸವಾರ ಬ್ರೇಕ್ ಹಾಕಿದ ಪರಿಣಾಮ, ಹಿಂದಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದ ಘಟನೆಯೊಂದು ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಬೈಕ್ ಸವಾರ ಹಾಗೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ನಾರಾಯಣಪುರ ಗ್ರಾಮದ ರಸ್ತೆಯಲ್ಲಿ ಬೈಕ್ ಸವಾರ ಚಲಿಸುತ್ತಿದ್ದಾಗ ಹಾವೊಂದು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ತಕ್ಷಣವೇ ಸವಾರ ಹಾವನ್ನು ರಕ್ಷಿಸಲು ಮತ್ತು ತಾನು ಬದಲಿ ದಾರಿ ಮಾಡಿಕೊಳ್ಳಲು ಬೈಕ್ ನಿಲ್ಲಿಸಿದ್ದಾನೆ. ಆದರೆ, ಇದೇ ವೇಳೆ ಬೈಕ್ನ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ದಿಢೀರನೆ ಬೈಕ್ ನಿಂತಿರುವುದು ಕಂಡುಬಂದಿದೆ.
ಬೈಕ್ ಸವಾರನನ್ನು ಹಾಗೂ ಬೈಕನ್ನು ತಪ್ಪಿಸಲು ಬಸ್ ಚಾಲಕ ತಕ್ಷಣವೇ ಬ್ರೇಕ್ ಒತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಅದೇ ಸಮಯದಲ್ಲಿ ಬಸ್ಸಿನ ಬ್ರೇಕ್ ಬ್ಲೇಡ್ ಕಟ್ ಆಗಿದೆ. ನಿಯಂತ್ರಣ ತಪ್ಪಿದ ಬಸ್ ನೇರವಾಗಿ ಬೈಕಿಗೆ ಡಿಕ್ಕಿ ಹೊಡೆದು, ರಸ್ತೆ ಪಕ್ಕದ ತೋಟಕ್ಕೆ ನುಗ್ಗಿದೆ.
ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುವ ಸಾಧ್ಯತೆ ಇತ್ತು. ಒಂದು ವೇಳೆ ಲೈಟ್ ಕಂಬಕ್ಕೆ ಡಿಕ್ಕಿಯಾಗಿದ್ದರೆ ಭಾರಿ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ, ಬಸ್ ಚಾಲಕ ಅತ್ಯಂತ ಚಾಣಾಕ್ಷತನದಿಂದ ಸಮಯಪ್ರಜ್ಞೆ ಮೆರೆದು ಬಸ್ಸನ್ನು ಕಂಬಕ್ಕೆ ಡಿಕ್ಕಿಯಾಗದಂತೆ ನಿಯಂತ್ರಿಸಿ ತೋಟದ ಕಡೆಗೆ ತಿರುಗಿಸಿದ್ದಾರೆ. ಇದರಿಂದಾಗಿ ಭಾರಿ ಜಸ್ಟ್ ಮಿಸ್ ಆಗಿದೆ.
ಸರ್ಕಾರಿ ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಭೀತಿಯಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















Leave a Reply