ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರಿ ಗಾಳಿ-ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಎಲ್ಲಾ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ಇಂದು (ಒಂದು ದಿನ ಮಾತ್ರ) ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರು ಆದೇಶ ಹೊರಡಿಸಿದ್ದಾರೆ.
ನಿನ್ನೆ (ಭಾನುವಾರ) ಮಧ್ಯಾಹ್ನದಿಂದಲೇ ಮಲೆನಾಡು ಭಾಗದಲ್ಲಿ ರಣಭೀಕರ ಗಾಳಿ ಹಾಗೂ ಭಾರಿ ಮಳೆ ಸುರಿಯುತ್ತಿದೆ. ಗಾಳಿಯ ತೀವ್ರತೆಗೆ ಬೃಹತ್ ಗಾತ್ರದ ಮರಗಳು ರಸ್ತೆಗಳಿಗೆ ಉರುಳಿಬಿದ್ದಿದ್ದು, ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮರಗಳನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಲು ಸ್ಥಳೀಯ ಆಡಳಿತ ಶ್ರಮಿಸುತ್ತಿದೆ.
ಸಿಡಿಲು ಮತ್ತು ಭಾರಿ ಗಾಳಿಗೆ ಮರಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಮಲೆನಾಡಿನ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದ್ದು, ಸಾರ್ವಜನಿಕರು ತೀವ್ರ ಕಂಗಾಲಾಗಿದ್ದಾರೆ.
ಧಾರಾಕಾರ ಮಳೆ ಹಾಗೂ ಬಿರುಗಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಹಶೀಲ್ದಾರ್ ಅವರು ಇಂದು ಒಂದು ದಿನದ ಮಟ್ಟಿಗೆ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರದೇ ಸುರಕ್ಷಿತವಾಗಿರುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.














Leave a Reply