ಚಿಕ್ಕಮಗಳೂರು: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ಅವರು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಜೊತೆಗೆ, ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಆತಂಕದ ಕುರಿತು ರೈತರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ತಮ್ಮ ಪ್ರವಾಸದ ಭಾಗವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಎನ್.ಆರ್.ಪುರ ತಾಲೂಕಿನ ಪ್ರಸಿದ್ಧ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಪೀಠದ ಜಗದ್ಗುರು ಶ್ರೀ ರಂಭಾಪುರಿ ಭಗವತ್ಪಾದರ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದು, ಪ್ರಸ್ತುತ ರಾಜ್ಯದ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಅಭಿವೃದ್ಧಿ ಕುರಿತು ಶ್ರೀಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

145 ಗ್ರಾಮಗಳ ರೈತರಲ್ಲಿ ಆತಂಕ: ಸಿಎಂ ಜೊತೆ ಅಹವಾಲು ಸಭೆ:
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ರೂಪಿಸಲಾಗಿರುವ ಕಸ್ತೂರಿ ರಂಗನ್ ವರದಿ ಜಾರಿಯಾದರೆ ತಮ್ಮ ಜಮೀನು ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಸುಮಾರು 145 ಗ್ರಾಮಗಳ ರೈತರಲ್ಲಿ ತೀವ್ರ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಪ್ರತಿನಿಧಿಗಳು ಹಾಗೂ ನಾಯಕರೊಂದಿಗೆ ವಿಶೇಷ ಅಹವಾಲು ಸಭೆ ನಡೆಸಲಿದ್ದಾರೆ.
ವರದಿ ಜಾರಿಯಿಂದ ಎದುರಾಗುವ ಸವಾಲುಗಳು ಹಾಗೂ ಕಾಫಿನಾಡಿನ ರೈತರ ಇತರೆ ಮೂಲಭೂತ ಸಮಸ್ಯೆಗಳ ಕುರಿತು ರೈತರು ಸಿಎಂ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಲಿದ್ದಾರೆ. ಈ ಸಭೆಯಲ್ಲಿ ರೈತರ ಆತಂಕವನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಿಎಂ ಭರವಸೆ ನೀಡುವ ಸಾಧ್ಯತೆಯಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಇಂದಿನ ಈ ಭೇಟಿ ಮತ್ತು ಸಭೆಗಳು ತೀವ್ರ ಕುತೂಹಲ ಮೂಡಿಸಿದ್ದು, ಜಿಲ್ಲೆಯ ಜ್ವಲಂತ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

