ಚಿಕ್ಕಮಗಳೂರು: 12ನೇ ಶತಮಾನದ ಮಹಾನ್ ಶರಣ ಬಸವಣ್ಣನವರ ಕುರಿತು ಬಸವ ಮಂಟಪ ಪುಸ್ತಕದಲ್ಲಿ ಪ್ರಕಟವಾಗಿರುವ ಲೇಖನದ ವಿಚಾರವಾಗಿ ಬಾಳೆಹೊನ್ನೂರಿನ ರಂಭಾಪುರಿ ಪೀಠ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠ, ಬಸವಣ್ಣನವರಂತಹ ಮಹಾತ್ಮರ ಬಗ್ಗೆ ಹಗುರವಾಗಿ ಮಾತನಾಡುವುದು ಹಾಗೂ ಬರೆಯುವುದು ಆಕ್ಷೇಪಾರ್ಹ ಎಂದು ತಿಳಿಸಿದೆ.
ಯಾವುದೇ ವ್ಯಕ್ತಿಗಳು ಯಾವುದೇ ಮಹಾತ್ಮರ ಕುರಿತು ಅಸಹನೀಯವಾದ ಮಾತುಗಳನ್ನಾಡುವುದು ಅಥವಾ ಬರೆಯುವುದು ಸರಿಯಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇತಿಹಾಸವನ್ನು ಮೀರಿಯೂ ಬಹುಸಂಖ್ಯಾತ ಜನರು ತಮ್ಮ ಆರಾಧ್ಯ ಮಹಾತ್ಮರ ಬಗ್ಗೆ ಅಪಾರ ಭಕ್ತಿ ಮತ್ತು ಗೌರವದ ಭಾವನೆ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಜನರ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ಕೆರಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಪ್ರದಾಯ ಮತ್ತು ಪರಂಪರೆಯ ಮಹಾತ್ಮರನ್ನು ಅವಹೇಳನ ಮಾಡುವುದು ಖಂಡನೀಯ. ಸಮಾಜದಲ್ಲಿ ಪರಸ್ಪರ ಗೌರವ, ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠ ತಿಳಿಸಿದೆ.


