ಹಾಸನ: ಜಗನ್ಮಾತೆ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಹಾಸನ ನಗರಕ್ಕೆ ಆಗಮಿಸುತ್ತಿದ್ದು, ನಗರದಾದ್ಯಂತ ಜನಜಂಗುಳಿ ಕಂಡುಬರುತ್ತಿದೆ.
ಶ್ರೀ ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಧರ್ಮದರ್ಶನದ ಸರತಿ ಸಾಲು ಇಂದು ಭಾನುವಾರ ತಣ್ಣೀರುಹಳ್ಳದವರೆಗೂ ತಲುಪಿರುವುದು ಕಂಡುಬಂದಿದೆ. ದೇವಿಯ ದರ್ಶನಕ್ಕಾಗಿ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ದರ್ಶನಕ್ಕೆ ಆಗಮಿಸುತ್ತಿರುವ ಹಾಗೂ ದರ್ಶನ ಮುಗಿಸಿ ತಮ್ಮ ಊರುಗಳಿಗೆ ಮರಳುತ್ತಿರುವ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದ ಹೆಚ್ಚಿನ ಬಸ್ಗಳ ವ್ಯವಸ್ಥೆ ಹಾಗೂ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ಸಾರಿಗೆ ವ್ಯವಸ್ಥೆಗಳು ಸಾಲುತ್ತಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.
ನಗರದ ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ ಹಾಗೂ ದೇವಾಲಯದ ಸುತ್ತಮುತ್ತ ಭಾರೀ ಜನಸಂದಣಿ ಕಂಡುಬರುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಒಟ್ಟಿನಲ್ಲಿ ಶ್ರೀ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಹಾಸನ ನಗರಕ್ಕೆ ಭಕ್ತರ ಮಹಾಪೂರವೇ ಹರಿದುಬರುತ್ತಿದ್ದು, ನಗರದೆಲ್ಲೆಡೆ ಹಬ್ಬದ ಸಂಭ್ರಮದ ವಾತಾವರಣ ಮನೆಮಾಡಿದೆ.



