ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ಲಾರಿ ಅಪಘಾತ ಸಂಭವಿಸಿದ್ದು, ಸಾವಿನ ದವಡೆಯಿಂದ ಕ್ಲೀನರ್ ಅದೃಷ್ಟವಶಾತ್ ಪಾರಾಗಿದ್ದಾರೆ. ದೊಡ್ಡಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ 12 ಚಕ್ರದ ಲಾರಿಯು ರಸ್ತೆಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಉರುಳಿದೆ. ಈ ವೇಳೆ ಲಾರಿಯು ಎಸ್ಟೇಟ್ ಕಾರ್ಮಿಕರ ಲೈನ್ ಮನೆಗಳ ಅಂಗಳಕ್ಕೇ ಬಂದು ಬಿದ್ದಿದ್ದು, ಇನ್ನೊಂದು ಪಲ್ಟಿಯಾಗಿದ್ದಲ್ಲಿ ದೊಡ್ಡ ಮಟ್ಟದ ಸಾವು-ನೋವು ಸಂಭವಿಸುವ ಸಾಧ್ಯತೆಯಿತ್ತು.
ಅಪಘಾತದ ತೀವ್ರತೆಗೆ ಲಾರಿಯ ಕ್ಯಾಬಿನ್ ಸಂಪೂರ್ಣ ಜಜ್ಜಲ್ಪಟ್ಟಿದ್ದು, ಅದರೊಳಗೆ ಸಿಲುಕಿಕೊಂಡಿದ್ದ ಕ್ಲೀನರ್ ಸುಮಾರು ಎರಡು ಗಂಟೆಗಳ ಕಾಲ ಹೊರಬರಲಾಗದೆ ನರಕಯಾತನೆ ಅನುಭವಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಾಳೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿ ಕ್ರೇನ್ ನೆರವಿನಿಂದ ಲಾರಿಯನ್ನು ಪಕ್ಕಕ್ಕೆ ಸರಿಸಿ ಕ್ಲೀನರ್ನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕ್ಲೀನರ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ ಜೆಸಿಬಿ ಮೂಲಕ ತಾತ್ಕಾಲಿಕ ದಾರಿ ನಿರ್ಮಿಸಿ ಲಾರಿಯನ್ನು ಮೇಲೆತ್ತಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ತನಿಖೆ ಮುಂದುವರಿದಿದೆ.
















Leave a Reply