ಚಿಕ್ಕಮಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಎದುರಾಗಿದ್ದ ಆಟೋ ಗ್ಯಾಸ್ ಅಭಾವಕ್ಕೆ ಸದ್ಯ ಮುಕ್ತಿ ಸಿಕ್ಕಿದ್ದು, ಕೊನೆಗೂ ಕಾಫಿನಾಡಿಗೆ ಎಲ್ಪಿಜಿ ಪೂರೈಕೆಯಾಗಿದೆ. ನಗರದ ತೇಗೂರು ಬಳಿಯ ಇಂಡಿಯನ್ ಆಯಿಲ್ ಬಂಕ್ಗೆ ಗ್ಯಾಸ್ ಟ್ಯಾಂಕರ್ ಆಗಮಿಸುತ್ತಿದ್ದಂತೆಯೇ ಚಾಲಕರು ತಮ್ಮ ಆಟೋಗಳೊಂದಿಗೆ ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸುಮಾರು ಎರಡು ಕಿಲೋಮೀಟರ್ಗಿಂತಲೂ ಅಧಿಕ ದೂರ ಸಾವಿರಕ್ಕೂ ಹೆಚ್ಚು ಆಟೋಗಳು ಸರದಿ ಸಾಲಿನಲ್ಲಿ ನಿಂತಿರುವುದು ಇಂಧನಕ್ಕಾಗಿ ಚಾಲಕರು ಅನುಭವಿಸಿದ ಸಂಕಷ್ಟಕ್ಕೆ ಸಾಕ್ಷಿಯಾಗಿದೆ. ಆದರೂ ಸದ್ಯಕ್ಕೆ ಸೀಮಿತ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ವಿತರಿಸಲಾಗುತ್ತಿದ್ದು, ಪ್ರತಿ ಆಟೋಗೆ ಕೇವಲ 700 ರೂಪಾಯಿ ಮೌಲ್ಯದ ಗ್ಯಾಸ್ ಮಾತ್ರ ಲಭ್ಯವಾಗುತ್ತಿದೆ.
ಕಳೆದ ಏಳು ದಿನಗಳಿಂದ ಗ್ಯಾಸ್ ಇಲ್ಲದೆ ಆಟೋಗಳನ್ನು ಮನೆ ಮತ್ತು ಶೆಡ್ಗಳಲ್ಲಿ ನಿಲ್ಲಿಸಿದ್ದ ಚಾಲಕರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದರು. ಇಎಂಐ ಪಾವತಿಸಲು ಮತ್ತು ಸಂಸಾರ ನಡೆಸಲು ಹರಸಾಹಸ ಪಡುತ್ತಿದ್ದ ಚಾಲಕರು ಸರ್ಕಾರದ ನೆರವಿಗೆ ಮೊರೆ ಇಟ್ಟಿದ್ದರು. ಇದೀಗ ಗ್ಯಾಸ್ ಪೂರೈಕೆಯಾಗಿರುವುದು ಚಾಲಕ ವರ್ಗದಲ್ಲಿ ಸಣ್ಣ ಸಮಾಧಾನ ತಂದಿದ್ದರೂ, ಇಂಧನ ಕೊರತೆಯ ಈ ಸಮಸ್ಯೆಗೆ ಸರ್ಕಾರ ಕಾಯಂ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.














Leave a Reply