🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಭೀತಿ: ಫೋಟೋ, ಸೆಲ್ಫಿಗಾಗಿ ನಿಲ್ಲುವ ಪ್ರವಾಸಿಗರಿಗೆ ಎಚ್ಚರಿಕೆ

---Advertisement---

 

ಚಿಕ್ಕಮಗಳೂರು, : ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಇದೀಗ ಚಿರತೆ ಕಾಣಿಸಿಕೊಂಡಿರುವುದು ಪ್ರವಾಸಿಗರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಚಿಕ್ಕಮಗಳೂರು ಮತ್ತು ಮಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಘಾಟ್ ಮಾರ್ಗವಾದ ಚಾರ್ಮಾಡಿ ಘಾಟ್ ದಟ್ಟ ಅರಣ್ಯ ಹಾಗೂ ವನ್ಯಜೀವಿಗಳ ಸಂಚಾರಕ್ಕೆ ಪ್ರಸಿದ್ಧವಾಗಿದೆ. 

ಇತ್ತೀಚೆಗೆ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರ ಕಣ್ಣಿಗೆ ಚಿರತೆಯೊಂದು ಬಿದ್ದಿದ್ದು, ಬೇಟೆಗೆ ಹೊಂಚು ಹಾಕಿ ಕಾದು ಕುಳಿತ ಭಂಗಿಯಲ್ಲಿ ಕಾಣಿಸಿಕೊಂಡ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪ್ರತಿದಿನ ನೂರಾರು ಪ್ರವಾಸಿಗರು ಚಾರ್ಮಾಡಿ ಘಾಟಿಯ ನೈಸರ್ಗಿಕ ಸೌಂದರ್ಯ ವೀಕ್ಷಿಸಲು, ಫೋಟೋ ಹಾಗೂ ಸೆಲ್ಫಿ ತೆಗೆಯಲು ವಾಹನಗಳನ್ನು ನಿಲ್ಲಿಸಿ ರಸ್ತೆ ಬದಿಗೆ ಇಳಿಯುತ್ತಾರೆ. ಆದರೆ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಅನಗತ್ಯವಾಗಿ ವಾಹನಗಳಿಂದ ಕೆಳಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಈಗಾಗಲೇ ಕಾಡಾನೆಗಳ ಸಂಚಾರ ಸಾಮಾನ್ಯವಾಗಿದ್ದು, ಇದೀಗ ಚಿರತೆಯೂ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಕಾಡಾನೆ ಎದುರಾದರೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿ ದೂರ ಸರಿಯಲು ಸಾಧ್ಯವಾದರೂ, ಚಿರತೆ ಹಠಾತ್ ಎದುರಾದರೆ ತಪ್ಪಿಸಿಕೊಳ್ಳುವುದು ಕಷ್ಟವಾಗಬಹುದು ಎಂಬ ಎಚ್ಚರಿಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. 

ವಿಶೇಷವಾಗಿ ಬೈಕ್ ಸವಾರರು ಹಾಗೂ ಪ್ರವಾಸಿಗರು ರಾತ್ರಿ ವೇಳೆ ಅಥವಾ ಒಂಟಿ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಚಾರ್ಮಾಡಿ ಘಾಟಿಯ ದಟ್ಟ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನ ಸಹಜವಾಗಿರುವುದರಿಂದ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.