ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಯೊಬ್ಬರಿಗೆ ಅವರ 25 ವರ್ಷದ ಮಗಳ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಕ್ಷಯ್ ಹಾಗೂ ಸಾಹುಲ್ ಎಂದು ಗುರುತಿಸಲಾಗಿದೆ. ಇವರು ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಬೆಂಗಳೂರು ಮೂಲದ “ಯೋಗೀಶ್” ಎಂಬ ಹೆಸರಿನಲ್ಲಿ ಕರೆ ಮಾಡಿ ಮಹಿಳೆಯನ್ನು ಸಂಪರ್ಕಿಸುತ್ತಿದ್ದರು ಎನ್ನಲಾಗಿದೆ.
ಮಹಿಳೆಯ ಮಗಳ ಅಶ್ಲೀಲ ಫೋಟೋಗಳನ್ನು ಕಳುಹಿಸಿ, ಹಣ ನೀಡದಿದ್ದರೆ ಫೋಟೋಗಳನ್ನು ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಪ್ರತಿದಿನ ರಾತ್ರಿ ಕರೆ ಮಾಡಿ ಹಣ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಇದರಿಂದ ಆತಂಕಗೊಂಡ ಮಹಿಳೆ ಲಕ್ಕವಳ್ಳಿ ಪೊಲೀಸ್ ಠಾಣೆ ಹಾಗೂ ಚಿಕ್ಕಮಗಳೂರು ಸಿಇಎನ್ (Cyber, Economic and Narcotics) ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದರು.ಪೊಲೀಸರ ಕಾರ್ಯಾಚರಣೆಯಿಂದ ಪ್ರಕರಣ ದಾಖಲಾಗಿದ 24 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಲಕ್ಕವಳ್ಳಿ ಮತ್ತು ಚಿಕ್ಕಮಗಳೂರು ಸಿಇಎನ್ ಠಾಣೆಗಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
















Leave a Reply