ಕನ್ನೇರಿ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕ ಆಕ್ರೋಶ; ‘ಗೋ ಬ್ಯಾಕ್’ ಘೋಷಣೆ!

Spread the love

 

​ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿ ಸ್ವಾಮೀಜಿ ವಿರುದ್ಧ ನಿವೃತ್ತ ಉಪನ್ಯಾಸಕರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

​ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿವೃತ್ತ ಉಪನ್ಯಾಸಕರು, “ಅವನಿಗೆ ಗೋ ಬ್ಯಾಕ್ ಎನ್ನಬೇಕಿತ್ತು, ಆದರೆ ಆತ ನನಗೆ ಸಿಗಲಿಲ್ಲ. ಬಸವಣ್ಣನ ಅನುಯಾಯಿಗಳು ಇರುವ ಈ ಜಾಗಕ್ಕೆ ಬರಲು ಅವನಿಗೆ ಯಾವುದೇ ಅಧಿಕಾರವಿಲ್ಲ” ಎಂದು ಕಿಡಿಕಾರಿದರು.

​”ಇಲ್ಲಿಗೆ ಅವರು ಬಂದಿರುವುದು ಧರ್ಮವನ್ನು ಒಡೆಯುವ ಅಪಪ್ರಚಾರ ಮಾಡಲು. ಲಿಂಗ ಧರಿಸಿರುವವರನ್ನು ದಾರಿ ತಪ್ಪಿಸಲು ಮತ್ತು ಧರ್ಮ ಸೀಳಲು ಬಂದಿದ್ದಾರೆ. ಯಾವುದೋ ಸಂಘಟನೆಗೆ ಗುಲಾಮರಾಗಿರುವ ಇವರನ್ನು ಕೋಟಿ-ಕೋಟಿ ಹಣ ಕೊಟ್ಟು ಬುಕ್ ಮಾಡಲಾಗಿದೆ. ಇಂತಹ ಗುಲಾಮರು ನಮ್ಮ ಗುರುಗಳನ್ನು ನಿಂದಿಸುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದರು.

​’ತಾಲಿಬಾನಿ’ ಹೇಳಿಕೆಗೆ ತೀವ್ರ ವಿರೋಧ:

​ವಿಶ್ವಗುರು ಬಸವಣ್ಣನವರಿಗೆ ಮತ್ತು ಅವರ ಅನುಯಾಯಿಗಳಿಗೆ ಸ್ವಾಮೀಜಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, “ನಮ್ಮನ್ನು ತಾಲಿಬಾನಿಗಳು ಎಂದು ಕರೆದಿದ್ದಾರೆ. ಖಾವಿ ಧರಿಸಿದವರ ಬಾಯಲ್ಲಿ ಇಂತಹ ಕೆಟ್ಟ ಮಾತುಗಳು ಬರಬಾರದು” ಎಂದು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.

​ನಗರದ ಕುವೆಂಪು ಕಲಾಮಂದಿರದಲ್ಲಿ ಕೃಷಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *