ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪ್ರಕೃತಿಯ ವಿಕೋಪಕ್ಕೆ ಮಹಿಳೆಯೊಬ್ಬರು ತನ್ನ ಕೈಯನ್ನೇ ಕಳೆದುಕೊಂಡಿರುವ ಘೋರ ದುರಂತ ಸಂಭವಿಸಿದೆ. ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 42 ವರ್ಷದ ಪುಷ್ಪ ಎಂಬುವವರ ಮೇಲೆ ಬಿರುಗಾಳಿಗೆ ಬೃಹತ್ ಮರವೊಂದು ಸೀಳಿ ಬಿದ್ದ ಪರಿಣಾಮ, ಅವರ ಕೈ ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ನಿನ್ನೆ ರಾತ್ರಿಯಿಂದ ಮತ್ತೆ ಆರ್ಭಟಿಸುತ್ತಿದ್ದು, ತಾಲೂಕಿನಾದ್ಯಂತ ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಬಡವನದಿಣ್ಣೆ ಗ್ರಾಮದಲ್ಲಿ ಪೂರ್ಣೇಶ್ ಎಂಬುವವರ ಮನೆಯ ಮೇಲೆ ದೈತ್ಯ ಮರವೊಂದು ಉರುಳಿ ಬಿದ್ದ ಪರಿಣಾಮ ಇಡೀ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ರಣಗಾಳಿಯ ಹೊಡೆತಕ್ಕೆ ಹಲವೆಡೆ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮತ್ತಿಕಟ್ಟೆ ಗ್ರಾಮ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳಿಗೆ ಮರಗಳು ಅಡ್ಡಲಾಗಿ ಬಿದ್ದಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆಯ ತೀವ್ರತೆಯನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ತಾಲೂಕು ಆಡಳಿತ ಅಧಿಕೃತ ರಜೆ ಘೋಷಿಸಿದೆ.















Leave a Reply