ಚಿಕ್ಕಮಗಳೂರಿನಲ್ಲಿ ರೈತನ ಬೆವರಿನ ಹಣ ದೋಚಿದ್ದ ಅಂತರಜಿಲ್ಲಾ ದರೋಡೆಕೋರರು ಈಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಕಷ್ಟಪಟ್ಟು ಬೆಳೆದ ಆಲೂಗಡ್ಡೆ ಮತ್ತು ಬೀನ್ಸ್ ಮಾರಿ ತರುತ್ತಿದ್ದ 60 ವರ್ಷದ ವೃದ್ಧ ರೈತ ನಿಂಗೇಗೌಡ ಎಂಬುವವರನ್ನು ನಂಬಿಸಿ, ಬೈಕ್ನಲ್ಲಿ ಕೂರಿಸಿಕೊಂಡು ಹೋಗಿ ಹಣ ದೋಚಿದ್ದ ಕಿರಾತಕರನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಸೆರೆಹಿಡಿದಿದ್ದಾರೆ.
ಫೆಬ್ರವರಿ 16ರ ಮುಂಜಾನೆ ಎಐಟಿ ಸರ್ಕಲ್ ಬಳಿ ಬಸ್ಗಾಗಿ ಕಾಯುತ್ತಿದ್ದ ರೈತನಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಇಬ್ಬರು ಆರೋಪಿಗಳು, ಕಣಿವೆ ದೇವಸ್ಥಾನದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದರು. ರೈತನ ಬಳಿಯಿದ್ದ 50,000 ರೂಪಾಯಿಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆ ಮಲೆನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ ನಗರ ಪೊಲೀಸರು, ತಾಂತ್ರಿಕ ಮತ್ತು ವೈಜ್ಞಾನಿಕ ತನಿಖೆ ನಡೆಸಿ ತುಮಕೂರು ಜಿಲ್ಲೆ ತುರುವೇಕೆರೆ ಮೂಲದ ಧನಪಾಲ ಮತ್ತು ಓರ್ವ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದೋಚಿದ್ದ ಹಣದಲ್ಲಿ 29,500 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ರೈತನಿಗೆ ನ್ಯಾಯ ಒದಗಿಸಿದ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಎಸ್ಪಿ ಅವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
















Leave a Reply