ಸಿ.ಟಿ. ರವಿ ಮಾನನಷ್ಟ ಮೊಕದ್ದಮೆ: ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರು, ಹೇಳಿಕೆ ದಾಖಲು

Spread the love

 

ಚಿಕ್ಕಮಗಳೂರು: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ತಮ್ಮ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ಪ್ರಶ್ನಿಸಿ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ, ಇಂದು ಅವರು ನಗರದ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

2022ರಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಸಿ.ಟಿ. ರವಿ ಅವರ ವಿರುದ್ಧ ‘ಅಕ್ರಮ ಆಸ್ತಿ’ ಮತ್ತು ‘ಲೂಟಿ ರವಿ’ ಎಂಬ ಪದಗಳನ್ನು ಬಳಸುವ ಮೂಲಕ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹೇಳಿಕೆಗಳು ತಮ್ಮ ಘನತೆಗೆ ಕುಂದು ತಂದಿವೆ ಎಂದು ಆರೋಪಿಸಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ನಗರದ 2ನೇ ಜೆಎಂಎಫ್‌ಸಿ (JMFC) ನ್ಯಾಯಾಲಯಕ್ಕೆ ಇಂದು ಭೇಟಿ ನೀಡಿದ ಸಿ.ಟಿ. ರವಿ, ನ್ಯಾಯಾಧೀಶರಾದ ಅನುರಾಧ ಹೆಚ್.ಟಿ. ಅವರ ಮುಂದೆ ದೂರುದಾರರ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿದರು. ಕೆಪಿಸಿಸಿ ವಕ್ತಾರರ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ದೂರುದಾರರ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *