ಚಿಕ್ಕಮಗಳೂರು: ಇಂಧನ ತೆರಿಗೆ ಇಳಿಕೆ ಕುರಿತು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ವೇಳೆ, ಕಾಂಗ್ರೆಸ್ ಪಕ್ಷದ ನಡೆಗೆ ಟೀಕೆಗಳು ಕೇಳಿಬರುತ್ತಿವೆ ಎಂದು ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಇಳಿಕೆಯಿಂದ ಜನರು ಸಂತೋಷಗೊಂಡಿದ್ದಾರೆ. ಆದರೆ ಕಾಂಗ್ರೆಸ್ ಇದನ್ನು ಸ್ವಾಗತಿಸುವ ಬದಲು ಸಂಕಟಪಡುತ್ತಿರುವುದು ವಿಷಾದನೀಯ ಎಂದು ಹೇಳಿದರು. ಯುದ್ಧ ಪರಿಸ್ಥಿತಿಯ ಪರಿಣಾಮ ಜನಸಾಮಾನ್ಯರಿಗೆ ತಟ್ಟಬಾರದೆಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರಿಗೆ ಇಳಿಕೆ ಮಾಡಿದ್ದಾರೆ ಎಂದು ಹೇಳಿದರು.
ಡಿಸಿಎಂ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅವರು ಈ ನಿರ್ಧಾರವನ್ನು ಸ್ವಾಗತಿಸಬೇಕಾಗಿತ್ತು. ಬೆಲೆ ಇಳಿದರೂ ವಿರೋಧಿಸುವುದು ಕಾಂಗ್ರೆಸ್ನ ನಿಲುವು ಎಂಬುದು ಸ್ಪಷ್ಟವಾಗುತ್ತದೆ. ಜನರಿಗೆ ಖುಷಿ ತಂದ ವಿಚಾರಗಳೇ ಕಾಂಗ್ರೆಸ್ಗೆ ಸಂಕಟವಾಗುತ್ತಿವೆ ಎಂದು ಟೀಕಿಸಿದರು.
ಉಪಚುನಾವಣೆ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ಉಪಚುನಾವಣೆಗಳು ತಕ್ಷಣ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಜನರ ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿವೆ. ಕಾಂಗ್ರೆಸ್ ಸೋತರೆ ಸರ್ಕಾರ ಬೀಳುವುದಿಲ್ಲ, ಆದರೆ ಜನರಿಂದ ಒಂದು ಸ್ಪಷ್ಟ ಸಂದೇಶ ಹೋಗುತ್ತದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿಯ ಕೊರತೆ ಹಾಗೂ ಬೆಲೆ ಏರಿಕೆ ವಿಷಯಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.













Leave a Reply