ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸೌಹಾರ್ದತೆಯ ಅಭೂತಪೂರ್ವ ಘಟನೆಯೊಂದು ನಡೆದಿದೆ. ತಲೆಮಾರುಗಳಿಂದ, ಅಂದರೆ ಸುಮಾರು ನೂರು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಲಿತ ಸಮುದಾಯದ ಜನರು ಗ್ರಾಮಸ್ಥರ ಸಹಕಾರದೊಂದಿಗೆ ಯಾವುದೇ ಅಡೆತಡೆ ಇಲ್ಲದೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.
ಸೌಹಾರ್ದ ಮಾತುಕತೆಗೆ ಒಲಿದ ಜಯ
ನಿಡಘಟ್ಟ ಗ್ರಾಮದಲ್ಲಿ 2000ಕ್ಕೂ ಹೆಚ್ಚು ಇತರೇ ಜನಾಂಗದ ಕುಟುಂಬಗಳಿದ್ದು, 80ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿವೆ. ಇಷ್ಟು ವರ್ಷಗಳ ಕಾಲ ಈ ಗ್ರಾಮದ ಯಾವುದೇ ದಲಿತರು ಇಲ್ಲಿನ ಆಂಜನೇಯ ದೇವಸ್ಥಾನಕ್ಕೆ ಪ್ರವೇಶಿಸಿರಲಿಲ್ಲ. ಆದರೆ, ಇತ್ತೀಚೆಗೆ ದಲಿತ ಮುಖಂಡರು ಹಾಗೂ ಇತರೇ ಜನಾಂಗದ ಪ್ರಮುಖರು ಒಟ್ಟಾಗಿ ಕುಳಿತು ಸೌಹಾರ್ದಯುತ ಮಾತುಕತೆ ನಡೆಸುವ ಮೂಲಕ ಈ ಐತಿಹಾಸಿಕ ತೀರ್ಮಾನಕ್ಕೆ ಬಂದಿದ್ದಾರೆ.
ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ
ಗ್ರಾಮಸ್ಥರ ಒಮ್ಮತದ ತೀರ್ಮಾನದಂತೆ, ಇಂದು ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಊರಿನ ಪ್ರಮುಖರ ಸಮ್ಮುಖದಲ್ಲಿ ದಲಿತ ಸಮುದಾಯದ ಬಾಂಧವರು ದೇವಸ್ಥಾನಕ್ಕೆ ಪ್ರವೇಶಿಸಿದರು. ಯಾವುದೇ ವಿಘ್ನ, ತಾರತಮ್ಯ ಅಥವಾ ಅಡೆತಡೆ ಇಲ್ಲದೆ ಎಲ್ಲರೂ ಒಟ್ಟಾಗಿ ದೇವರ ದರ್ಶನ ಪಡೆದರು. ಮೊದಲ ಬಾರಿಗೆ ದೇಗುಲ ಪ್ರವೇಶಿಸಿದ ದಲಿತರು ವಿಶೇಷ ಪೂಜೆ ಸಲ್ಲಿಸಿ, ಹರಕೆ ಸಮರ್ಪಿಸಿದರು.
ಶತಮಾನಗಳ ಕಾಲ ನಡೆದುಕೊಂಡು ಬಂದಿದ್ದ ಆಚರಣೆಯೊಂದನ್ನು ಪರಸ್ಪರ ಗೌರವ ಮತ್ತು ಸೌಹಾರ್ದ ಮಾತುಕತೆಯ ಮೂಲಕ ಬಗೆಹರಿಸಿ, ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದ ನಿಡಘಟ್ಟ ಗ್ರಾಮದ ನಡೆ ಈಗ ಜಿಲ್ಲಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.















Leave a Reply