मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ – ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಕಳೆದೊಂದು ಗಂಟೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದಿದೆ.
ಕೊಪ್ಪ, ಜಯಪುರ, ಬಾಳೆಹೊನ್ನೂರು ಹಾಗೂ ಶೃಂಗೇರಿ ಭಾಗಗಳಲ್ಲಿ ಮಳೆ ತೀವ್ರಗೊಂಡಿದ್ದು, ಹಲವೆಡೆ ಗಾಳಿ ಸಹ ಭಾರೀ ಪ್ರಮಾಣದಲ್ಲಿ ಬೀಸುತ್ತಿದೆ. ಗಾಳಿ-ಮಳೆಯ ಅಬ್ಬರಕ್ಕೆ ಕೊಪ್ಪ ತಾಲೂಕಿನ ಕೊಗ್ರೆ ಭಾಗದಲ್ಲಿ ಒಂದು ಬೃಹತ್ ಮರ ಧರೆಗುರುಳಿದೆ.
ಶೃಂಗೇರಿ-ಕೊಪ್ಪ ಮುಖ್ಯರಸ್ತೆಯ ಗುಡ್ಡೆತೋಟದ ಬಳಿ ಮರ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು,   ಮುಂದಿನ  ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಳೆ ರಕ್ಷಣೆಗೆ ಒಂಟಿ ಸಲಗ ಬೆನ್ನಟ್ಟಿದ ರೈತರು 

 

 

ತರೀಕೆರೆ: ​ಕಾಫಿನಾಡು ಚಿಕ್ಕಮಗಳೂರಿನಲ್ಲಿ ಆನೆ ಮತ್ತು ಮಾನವ ಸಂಘರ್ಷದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತರೀಕೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಪ್ರಾಣವನ್ನೇ ಪಣಕ್ಕಿಟ್ಟು ಕಾಡಾನೆಗಳನ್ನು ಎದುರಿಸುವಂತಾಗಿದೆ. ಕೃಷಿ ಜಮೀನಿಗೆ ನುಗ್ಗಿದ್ದ ಒಂಟಿ ಸಲಗವನ್ನು ಗ್ರಾಮದ ರೈತರು ಬೆದರಿಸಿ ಕಾಡಿಗೆ ಅಟ್ಟುವ ಸಾಹಸ ಮೆರೆದಿದ್ದಾರೆ. ರೈತರು ಒಂಟಿ ಸಲಗವನ್ನು ಹಿಮ್ಮೆಟ್ಟಿಸುತ್ತಿರುವ ಈ ರೋಚಕ ದೃಶ್ಯಗಳು ಸದ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

​ನಿರಂತರವಾಗಿ ದಾಳಿ ನಡೆಸುತ್ತಿರುವ ಗಜಪಡೆಯ ಉಪಟಳದಿಂದ ಇಲ್ಲಿನ ಕೃಷಿಕರು ಕಂಗೆಟ್ಟಿದ್ದು, ಪ್ರತಿ ರಾತ್ರಿಯೂ ಆತಂಕದಲ್ಲೇ ಕಳೆಯುವಂತಾಗಿದೆ. ಕಾಡಾನೆಗಳ ಈ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಈಗ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ರೈತರ ಜಮೀನುಗಳಿಗೆ ಆನೆಗಳು ನುಗ್ಗದಂತೆ ಶಾಶ್ವತ ಸೋಲಾರ್ ಬೇಲಿ ನಿರ್ಮಿಸಬೇಕು ಎಂಬ ಕೂಗು ಕುಂದೂರು ಗ್ರಾಮಸ್ಥರಿಂದ ಬಲವಾಗಿ ಕೇಳಿಬಂದಿದೆ.

ಸುಡು ಬಿಸಿಲಿಗೆ ಅಗ್ನಿ ಅನಾಹುತ: ಕಬ್ಬಿನ ಗದ್ದೆ, ಕಾಫಿ ತೋಟ ಸುಟ್ಟು ಭಸ್ಮ 

 

 

 

ಚಿಕ್ಕಮಗಳೂರು: ತಾಲೂಕಿನ ತೊಗರಿಹಂಕಲ್ ಗ್ರಾಮದಲ್ಲಿ ಸುಡುವ ಬಿಸಿಲಿನ ಧಗೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅತಿ ಹೆಚ್ಚು ಮಳೆಯಾಗುವ ಈ ಮಲೆನಾಡು ಭಾಗದಲ್ಲಿ ಇಂದು ಬೆಂಕಿಯ ಕೆನ್ನಾಲಗೆ ಎಂಟು ಎಕರೆ ಕಬ್ಬಿನ ಗದ್ದೆ ಹಾಗೂ ಒಂದೂವರೆ ಎಕರೆ ಕಾಫಿ ತೋಟವನ್ನು ಸುಟ್ಟು ಭಸ್ಮ ಮಾಡಿದೆ. ಸ್ಥಳೀಯ ರೈತರಾದ ಪುಟ್ಟಸ್ವಾಮಿ, ಹೇಮೇಶ್ ಮತ್ತು ಸುರೇಶ್ ಅವರಿಗೆ ಸೇರಿದ ಜಮೀನುಗಳಲ್ಲಿ ಈ ದುರಂತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉಪಕರಣಗಳು ಕೂಡ ಬೆಂಕಿಗಾಹುತಿಯಾಗಿವೆ. ಬೇಸಿಗೆಯ ಗಾಳಿಯ ವೇಗಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ಹರಡಿದ್ದು, ಗ್ರಾಮಸ್ಥರು ಸಮೀಪದ ಶುಭ ಕಾರ್ಯವೊಂದರಲ್ಲಿ ತೊಡಗಿದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಾರೋ ಅಜಾಗರೂಕತೆಯಿಂದ ಎಸೆದ ಬೀಡಿ ಅಥವಾ ಸಿಗರೇಟ್ ತುಂಡಿನಿಂದ ಈ ಕಿಡಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಅಕ್ಕಪಕ್ಕದ ತೋಟಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದ್ದು, ದೊಡ್ಡ ಮಟ್ಟದ ಹಾನಿ ತಡೆದಂತಾಗಿದೆ.

ಶಾಸಕ ರೇವಣ್ಣ ಹಾಗೂ ಸಂಸದ ಶ್ರೇಯಸ್ ಪಟೇಲ್ ನಡುವೆ ಟಾಕ್ ವಾರ್

ಹಾಸನ: ಹಾಸನ ಜಿಲ್ಲೆಯಲ್ಲಿ ರಾಜಕೀಯ ,ಟಾಕ್ ವಾರ್ ಆರಂಭ ಆಗಿದ್ದು  ಸಂಸದ ಶ್ರೇಯಸ್ ಪಟೇಲ್ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ನಡುವಿನ ವಾಗ್ವಾದ ತೀವ್ರಗೊಂಡಿದೆ.
ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲೆಯ ಕೆಲ ಅಧಿಕಾರಿಗಳಿಗೆ ರೇವಣ್ಣ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. “ಅಧಿಕಾರಿಗಳ ಮೇಲೆ ಸುಮ್ಮನೆ ಹಕ್ಕುಚ್ಯುತಿ ಮಂಡನೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ರೇವಣ್ಣ ಅಧಿಕಾರದಲ್ಲಿದ್ದಾಗ ಅವರ ಕಾರ್ಯಶೈಲಿಯನ್ನು ನಾವು ನೋಡಿದ್ದೇವೆ,” ಎಂದು ಹೇಳಿದರು.
ಪ್ರಾಮಾಣಿಕ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದ ಅವರು, “ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದಾದರೆ, ಅದನ್ನು ರೇವಣ್ಣ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಟೀಕಿಸಿದರು.
ಇದೇ ವೇಳೆ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಸ್ಥಾನ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ದೇವಸ್ಥಾನ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪ್ರಧಾನಿಯಿಂದ ಹಿಡಿದು ಸಿಎಂ ಹಾಗೂ ಮಂತ್ರಿಗಳವರೆಗೆ ಅಧಿಕಾರ ಅನುಭವಿಸಿದವರು ದೇವಸ್ಥಾನದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಬೇಕು,” ಎಂದರು.
ಅಧಿಕಾರಿಗಳ ಸಭೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಪಟೇಲ್, “ಮೊದಲ ಬಾರಿ ಸಭೆ ಕರೆದವರು ರೇವಣ್ಣ, ನಾನು ಅಲ್ಲ. ನಾನು ದೇವರಿಗೆ ಬಟ್ಟೆ ಹೊದಿಸಲು ಎರಡು ಲಕ್ಷ ರೂ. ನೀಡಿದ್ದೇನೆ. ಇದೇ ಕಾರಣಕ್ಕೆ ಅಧಿಕಾರಿಗಳನ್ನು ಏಕವಚನದಲ್ಲಿ ಬೈದಿದ್ದಾರೆ,” ಎಂದು ಆರೋಪಿಸಿದರು.
ಈ ಬೆಳವಣಿಗೆ ಹಾಸನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಇಬ್ಬರು ನಾಯಕರ ನಡುವಿನ ವಾಗ್ವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಗಲಾಟೆ ಮಾಡಿದಕ್ಕೆ ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಥಳಿಸಿದ ಏಕಲವ್ಯ ಶಾಲೆ ಪ್ರಿನ್ಸಿಪಲ್

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಏಕಲವ್ಯ ವಸತಿ ಶಾಲೆಯಲ್ಲಿ 7 ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಥಳಿತ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

 ಬೆಳಗ್ಗೆ ಶಾಲಾ ಮೈದಾನದಲ್ಲಿ ಅನುಮತಿ ಪಡೆಯದೆ ಆಟವಾಡುತ್ತಿದ್ದ 7 ವಿದ್ಯಾರ್ಥಿಗಳನ್ನು ಪ್ರಿನ್ಸಿಪಲ್ ಮತ್ತು ಸಿಬ್ಬಂದಿ ಗದರಿಸಿ, ನಂತರ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಬಾಸುಂಡೆಗಳು ಉಂಟಾಗಿವೆ ಎಂದು ತಿಳಿದುಬಂದಿದೆ.

ಇದಲ್ಲದೆ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಂತರ ಅವರನ್ನು ವಸತಿ ಶಾಲೆಯ ಒಂದು ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ರಾತ್ರಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯ ಹಿನ್ನೆಲೆ ಬೆಳಗಿನ ಘಟನೆಗೆ ಕಾರಣವೆಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಕೂಗಾಟ ಕೇಳಿದ ಸಮೀಪದ ಕಾಫಿ ತೋಟದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಣಕಲ್ ಪೊಲೀಸರು, ಕೊಠಡಿಯಲ್ಲಿ ಇದ್ದ 7 ವಿದ್ಯಾರ್ಥಿಗಳನ್ನು ರಕ್ಷಿಸಿ ವಿಚಾರಣೆ ನಡೆಸಿದರು.

ಗಾಯಗೊಂಡ ವಿದ್ಯಾರ್ಥಿಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿದ್ಯಾರ್ಥಿಗಳ ಹೇಳಿಕೆಯ ಪ್ರಕಾರ, ಶಾಲೆಯ ಪ್ರಿನ್ಸಿಪಲ್ ಸತೀಶ್ ಹಾಗೂ ಸಿಬ್ಬಂದಿ ಶುಭಮ್ ಅವರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿ; ಎಂಟು ಮಂದಿಗೆ ಗಾಯ

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಕೊಡಾಳ್ ಗ್ರಾಮದ ಸಮೀಪ ಸರ್ಕಾರಿ ಬಸ್ ಪಲ್ಟಿಯಾಗಿ ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್, ಮಾರ್ಗ ಮಧ್ಯೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ವಾಹನದ ನಿರ್ವಹಣಾ ಸಮಸ್ಯೆ ಅಥವಾ ಚಾಲಕನ ನಿಯಂತ್ರಣ ತಪ್ಪಿದದ್ದೇ ಕಾರಣವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅತಿಯಾದ ವೇಗವೂ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಈ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಬೆಟ್ಟದಮಳಲಿಯಲ್ಲಿ ಕಾಫಿ ಬೆಳೆಗಾರನ ಶೆಡ್‌ಗೆ ಬೆಂಕಿ: ಲಕ್ಷಾಂತರ ಮೌಲ್ಯದ ಕೃಷಿ ಸಲಕರಣೆಗಳು ಭಸ್ಮ

ಚಿಕ್ಕಮಗಳೂರು: ತಾಲೂಕಿನ ಆವತಿ ಹೋಬಳಿ ಬೆಟ್ಟದಮಳಲಿ ಗ್ರಾಮದಲ್ಲಿ ಕಾಫಿ ಬೆಳೆಗಾರರೊಬ್ಬರ ತೋಟದ ಶೆಡ್‌ಗೆ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬಿ. ಹೆಚ್. ಮಂಜುನಾಥ್ ಗೌಡ ಎಂಬುವರಿಗೆ ಸೇರಿದ ಈ ಶೆಡ್‌ನಲ್ಲಿ ಇರಿಸಲಾಗಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಜನರೇಟರ್, ನೀರೆತ್ತುವ ಪಂಪ್, ಜಟ್ಟುಗಳು, ಪೈಪ್‌ಗಳು ಹಾಗೂ ರಾಸಾಯನಿಕ ಗೊಬ್ಬರ ಸಂಪೂರ್ಣವಾಗಿ ನಾಶವಾಗಿವೆ. ಈ ಘಟನೆಯು ದುಷ್ಕರ್ಮಿಗಳ ಕೃತ್ಯವೆಂದು ಶಂಕಿಸಲಾಗಿದ್ದು, ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಯು. ರತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್ ಹಾಗೂ ಆವತಿ ಹೋಬಳಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಹೆಚ್. ಬಿ. ಮಹೇಂದ್ರ ಭೇಟಿ ನೀಡಿ ಮಂಜುನಾಥ್ ಗೌಡರಿಗೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಲ್ದೂರು ವೃತ್ತ ನಿರೀಕ್ಷಕರಿಗೆ ಮುಖಂಡರು ಒತ್ತಾಯಿಸಿದರು. ತೋಟಗಾರಿಕಾ ಇಲಾಖೆಯಿಂದ ಹೆಚ್ಚಿನ ಪರಿಹಾರ ಕೊಡಿಸುವಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಸರವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ. ಎಂ. ರಮೇಶ್, ಗ್ರಾಮ ಆಡಳಿತ ಅಧಿಕಾರಿ ಶಾಶ್ವತ್, ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಚಿಕ್ಕಮಗಳೂರು: ಆಣೂರು ಗ್ರಾಮ ಪಂಚಾಯಿತಿ ನೀರುಗಂಟಿ ಆತ್ಮಹತ್ಯೆ ಪ್ರಕರಣ – ಕೊನೆಗೂ FIR ದಾಖಲು


ಚಿಕ್ಕಮಗಳೂರು: ಆಣೂರು ಗ್ರಾಮ ಪಂಚಾಯಿತಿ ನೀರುಗಂಟಿ ಆತ್ಮಹತ್ಯೆ ಪ್ರಕರಣ – ಕೊನೆಗೂ FIR ದಾಖಲು
ಚಿಕ್ಕಮಗಳೂರು ತಾಲೂಕಿನ ಆಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ದೂರು ಪೊಲೀಸರು ಕೊನೆಗೂ FIR ದಾಖಲಿಸಿದ್ದಾರೆ. ಪ್ರಾರಂಭದಲ್ಲಿ ಅಸಹಜ ಮರಣ (UDR) ಪ್ರಕರಣವಾಗಿ ದಾಖಲಿಸಿದ್ದ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಇದೀಗ ಪ್ರಕರಣಕ್ಕೆ ತಿರುವು ದೊರೆತಿದೆ.
ಮಾರ್ಚ್ 15ರಂದು ತಮ್ಮ ಮನೆಯಲ್ಲಿ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಬರೆದಿದ್ದ ಡೆತ್ ನೋಟ್ ಆಧಾರವಾಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 108 ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಆಣೂರು ಗ್ರಾಮ ಪಂಚಾಯಿತಿಯ PDO, ಮಾಜಿ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ FIR ದಾಖಲಿಸಲಾಗಿದೆ. ಜೊತೆಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೂ ಆರೋಪ ಕೇಳಿಬಂದಿದ್ದು, ಅವರ ಮೇಲೂ ಪ್ರಕರಣ ದಾಖಲಾಗಿದೆ.
ಡೆತ್ ನೋಟ್‌ನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಮಾಜಿ ಅಧ್ಯಕ್ಷ ದಿನೇಶ್, ಸತೀಶ್, ಜಗದೀಶ್, ಪ್ರವೀಣ್ ಮತ್ತು ಭಾಸ್ಕರ್ ಅವರಿಂದ ಕಿರುಕುಳ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಸಂಬಳ ಸಮಸ್ಯೆಯಿಂದಾಗಿ ಮೈಕ್ರೋ ಫೈನಾನ್ಸ್ ಸಾಲ ತೀರಿಸಲಾಗದೆ, RBLSKS ಹಾಗೂ ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂಬುದನ್ನೂ ರಮೇಶ್ ಉಲ್ಲೇಖಿಸಿದ್ದಾರೆ. ಜೊತೆಗೆ ಹಣ ಸಂಬಂಧಿತ ವಿಚಾರದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಆದರೆ, ಪಂಚಾಯತ್ ರಾಜ್ ಆಯುಕ್ತರಾದ ಅರುಂಧತಿ ಚಂದ್ರಶೇಖರ್ ಅವರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, 11 ತಿಂಗಳ ಸಂಬಳ ನೀಡಿಲ್ಲ ಎಂಬ ವಿಷಯ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಕೆಲವು ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದೂ ತಿಳಿಸಿದ್ದಾರೆ.
ಇದಲ್ಲದೆ, ಡೆತ್ ನೋಟ್‌ನ ಸಂಪೂರ್ಣ ಮಾಹಿತಿಯನ್ನು ನೀಡದೆ UDR ಪ್ರಕರಣವಾಗಿ ವರದಿ ಸಲ್ಲಿಸಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧವೂ ಆರೋಪ ಕೇಳಿಬಂದಿದೆ. ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೆ ದಾರಿ ತಪ್ಪಿಸಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಹುಣಸಮಕ್ಕಿ ಗ್ರಾಮದ ನಿವಾಸಿಯಾಗಿದ್ದ ರಮೇಶ್ ಅವರ ಸಾವಿನ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆಲ್ದೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಅಪರೂಪದ ಶೋಲಾ ಹುಲ್ಲುಗಾವಲು ನಾಶ 

 

 

ಮಲೆನಾಡಿನ ಹಸಿರು ಹೊದಿಕೆಯಂತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಈಗ ಬೆಂಕಿಯ ಜ್ವಾಲೆಗಳು ಆವರಿಸಿವೆ. ಸುಡುವ ಬಿಸಿಲು ಒಂದೆಡೆಯಾದರೆ, ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಶೃಂಗೇರಿ ತಾಲೂಕಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ ಮತ್ತು ವಾಲೀಕುಂಜಗಿರಿ ಶ್ರೇಣಿಯ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಈ ಭೀಕರ ಅನಾಹುತಕ್ಕೆ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದು, ಅಪರೂಪದ ಸಸ್ಯಸಂಪತ್ತು ಹಾಗೂ ನೆಲದಲ್ಲಿ ಗೂಡು ಕಟ್ಟುವ ಅಸಹಾಯಕ ಪಕ್ಷಿ-ಸಂಕಲಗಳು ಬೆಂಕಿಗಾಹುತಿಯಾಗಿವೆ.

​ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಗಾಢ ನಿದ್ರೆಯಲ್ಲಿದೆ ಎಂಬ ಆರೋಪ ಕೇಳಿಬರುತ್ತಿದೆ. ಅರಣ್ಯ ವೀಕ್ಷಕರ ನೇಮಕ ಮಾಡದಿರುವುದು, ಬೆಂಕಿ ನಿಯಂತ್ರಣ ರೇಖೆಗಳನ್ನು ನಿರ್ಮಿಸದಿರುವುದು ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ. ಕಳೆದ ಒಂದು ವಾರದಿಂದ ಕಾಡು ಹೊತ್ತಿ ಉರಿಯುತ್ತಿದ್ದರೂ ಕಾರ್ಕಳ ಡಿಎಫ್‌ಓ ಸೇರಿದಂತೆ ಯಾವೊಬ್ಬ ಹಿರಿಯ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂಬುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ಕು ಜಿಲ್ಲೆಗಳ ಗಡಿ ಹಂಚಿಕೊಂಡಿರುವ ಈ ಸೂಕ್ಷ್ಮ ಪರಿಸರ ವಲಯವನ್ನು ಉಳಿಸಿಕೊಳ್ಳಲು ಅರಣ್ಯ ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.

ಮಲೆನಾಡಿನಲ್ಲಿ ಕಾಡಾನೆಗಳ ದಾಂದಲೆ ಹೆಚ್ಚಳ – ಮನೆ ಅಂಗಳಕ್ಕೂ ಕಾಲಿಟ್ಟ ಆನೆಗಳು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಸಮೀಪದ ಸತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿ ಆತಂಕವನ್ನು ಉಂಟುಮಾಡಿದೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಇದೀಗ ಅವು ಗ್ರಾಮ ಪ್ರದೇಶಗಳಿಗೂ ಪ್ರವೇಶಿಸುತ್ತಿವೆ.

ಸತ್ತಿಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಗ್ರಾಮ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಗೊಂಡಿದೆ. ಈ ಆನೆಗಳು ಮನೆಗಳ ಅಂಗಳಕ್ಕೆ ನುಗ್ಗಿ ಕಾಂಪೌಂಡ್ ಗೋಡೆಗಳನ್ನು ಧ್ವಂಸಗೊಳಿಸಿದ್ದು, ಸ್ಥಳೀಯರಲ್ಲಿ ಭೀತಿ ಉಂಟುಮಾಡಿವೆ.

ಕೃಷ್ಣ ಎಂಬವರಿಗೆ ಸೇರಿದ ಕಾಫಿ ನರ್ಸರಿಯಲ್ಲಿ ಕಾಡಾನೆಗಳು ದಾಂದಲೆ ನಡೆಸಿ ಲಕ್ಷಾಂತರ ಮೌಲ್ಯದ ಗಿಡಗಳನ್ನು ನಾಶಪಡಿಸಿವೆ. ಕಾಫಿ ಹಾಗೂ ಅಡಿಕೆ ತೋಟಗಳಿಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಮೂಡಿಗೆರೆ ಮತ್ತು ಆಲ್ದೂರು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದರಿಂದ ರಾತ್ರಿ ವೇಳೆಯಲ್ಲಿ ಅನವಶ್ಯಕವಾಗಿ ಹೊರಗೆ ತಿರುಗಾಡಬಾರದು ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.