ಪ್ರಕೃತಿ ಪವಾಡ: ನಿನ್ನೆ ವಾಲಿಬಾಲ್ ಆಟವಾಡಿದ್ದ ಭದ್ರಾ ನದಿ ಒಡಲು ಇಂದು ಜಲಾವೃತ!

Spread the love

 

​ಚಿಕ್ಕಮಗಳೂರು: ಮೂರು ದಶಕಗಳ ಬಳಿಕ ಬತ್ತಿ ಹೋಗಿದ್ದ ಭದ್ರಾ ನದಿಗೆ ಜೀವಕಳೆ; ರಾತ್ರೋರಾತ್ರಿ ಹೆಚ್ಚಿದ ನೀರಿನ ಮಟ್ಟ ಕಂಡು ಸ್ಥಳೀಯರು, ರೈತರು ನಿಟ್ಟುಸಿರು

​ಎನ್.ಆರ್.ಪುರ (ಬಾಳೆಹೊನ್ನೂರು): ಪ್ರಕೃತಿಯ ಮುಂದೆ ಮನುಷ್ಯ ಏನೇನೂ ಅಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ತೀವ್ರ ಮಳೆ ಕೊರತೆಯಿಂದಾಗಿ ಸಂಪೂರ್ಣ ಬತ್ತಿ ಹೋಗಿದ್ದ ಭದ್ರಾ ನದಿ ರಾತ್ರೋರಾತ್ರಿ ಭೋರ್ಗರೆದು ಹರಿಯುತ್ತಿದ್ದು, ನಿನ್ನೆ ನದಿಯ ಒಡಲಿನಲ್ಲಿ ವಾಲಿಬಾಲ್ ಆಡುತ್ತಿದ್ದ ಯುವಕರು ಇಂದು ಅಲ್ಲಿಗೆ ಕಾಲಿಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ!

​ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರಾ ನದಿ ತಪ್ಪಲಿನಲ್ಲಿ ಈ ಅಚ್ಚರಿಯ ವಿದ್ಯಮಾನ ನಡೆದಿದ್ದು, ಸ್ಥಳೀಯರನ್ನು ಬೆರಗುಗೊಳಿಸಿದೆ.

​ಮರಳುಗಾಡಾಗಿದ್ದ ನದಿ ಒಡಲು ಯುವಕರ ಆಟದ ಮೈದಾನವಾಗಿತ್ತು!

​ಕಳೆದ ಮೂರು ದಶಕಗಳಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಭದ್ರಾ ನದಿ ಈ ಬಾರಿ ಸಂಪೂರ್ಣ ತಳ ಕಂಡು ಬರಿದಾಗಿತ್ತು. ನದಿ ನೀರು ಬತ್ತಿ ಮರಳುಗಾಡಿನಂತಾಗಿದ್ದನ್ನು ಕಂಡ ಸ್ಥಳೀಯರೇ ಆತಂಕಕ್ಕೊಳಗಾಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡಿದ್ದ ಸ್ಥಳೀಯ ಯುವಕರು ಕಳೆದ ಎರಡು ತಿಂಗಳಿಂದ ನದಿಯ ಒಡಲಿನಲ್ಲೇ ವಾಲಿಬಾಲ್ ಕೋರ್ಟ್ ನಿರ್ಮಿಸಿಕೊಂಡು ದಿನಾಲು ಆಟವಾಡುತ್ತಿದ್ದರು.

​ಸೋಮವಾರ ವಾಲಿಬಾಲ್ ಕೋರ್ಟ್; ಮಂಗಳವಾರ ಜಲಾವೃತ!

​ಸೋಮವಾರ ಬೆಳಗ್ಗೆಯೂ ಯುವಕರು ಎಂದಿನಂತೆ ನದಿಯ ಒಳಗೆ ವಾಲಿಬಾಲ್ ಆಡಿದ್ದರು. ಆದರೆ ಪ್ರಕೃತಿಯ ಆಟವೇ ಬೇರೆಯಾಗಿತ್ತು. ಮಲೆನಾಡಿನ ಭಾಗದಲ್ಲಿ ಸುರಿದ ಮಳೆಯಿಂದಾಗಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಭದ್ರಾ ನದಿಯ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೋಮವಾರ ಬೆಳಗ್ಗೆ ಯುವಕರು ಆಡಿದ್ದ ಜಾಗ, ಮಂಗಳವಾರ ಬೆಳಗ್ಗಿನ ವೇಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ಸದ್ಯ ವಾಲಿಬಾಲ್ ಕೋರ್ಟ್‌ನ ನೆಟ್‌ಗೆ ಕಟ್ಟಿದ್ದ ಕಂಬಗಳು ಮಾತ್ರ ನೀರಿನ ಮೇಲ್ಭಾಗದಲ್ಲಿ ಗೋಚರಿಸುತ್ತಿದ್ದು, ನೀರಿನ ರಭಸಕ್ಕೆ ಯುವಕರು ಅಲ್ಲಿಗೆ ಹೋಗಲು ಭಯಪಡುತ್ತಿದ್ದಾರೆ.

​ರೈತರು, ಬೆಳಗಾರರಲ್ಲಿ ಮಂದಹಾಸ

​ಕಳೆದ ಎರಡು ತಿಂಗಳಿಂದ ಕರಗಿದ್ದ ಭದ್ರೆಯ ಒಡಲು ಇಂದು ಮತ್ತೆ ತುಂಬಿ ಹರಿಯುತ್ತಿರುವುದನ್ನು ಕಂಡು ಸ್ಥಳೀಯರು, ಭಾಗದ ರೈತರು ಹಾಗೂ ಕಾಫಿ ಬೆಳಗಾರರು ನಿಟ್ಟುಸಿರು ಬಿಟ್ಟಿದ್ದಾರೆ. 

Leave a Reply

Your email address will not be published. Required fields are marked *